ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುರುವಾರ ಶ್ವೇತಭವನದಲ್ಲಿ ಮಹತ್ವದ ಮಾತುಕತೆ ನಡೆಸಿದರು. ಝೆಲೆನ್ಸ್ಕಿ ಮತ್ತು ಪತ್ನಿ ಒಲೆನಾ ಝೆಲೆನ್ಸ್ಕಾ ಸಂಜೆ 3:33ಕ್ಕೆ ಕಪ್ಪು ಕಾರಿನಲ್ಲಿ ಶ್ವೇತಭವನಕ್ಕೆ ಆಗಮಿಸಿದರು. ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಸ್ವಾಗತಿಸಿದರು.
ಬೈಡನ್ ಜೊತೆಗಿನ ಭೇಟಿಯ ಮಹತ್ವದ ಕುರಿತು ಪ್ರತಿಕ್ರಿಯಿಸಿದ ಝೆಲೆನ್ಸ್ಕಿ, "ಇದು ಮಹತ್ವದ್ದು" ಎಂದರು. ಈ ಮಾತುಕತೆಗೂ ಹಿಂದಿನ ದಿನ, ಝೆಲೆನ್ಸ್ಕಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ಕೆವಿನ್ ಮೆಕಾರ್ಥಿ, ಹೌಸ್ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರೀಸ್ ಮತ್ತು ಅಮೆರಿಕ ಹೌಸ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದರು.
ಉಕ್ರೇನ್ಗೆ ಬೆಂಬಲವಾಗಿರುವ ಅಮೆರಿಕದ ನೆರವಿಗೆ ಝೆಲೆನ್ಸ್ಕಿ ಋಣಿಯಾಗಿದ್ದು, "ಅಧ್ಯಕ್ಷ ಜೋ ಬೈಡನ್, ಅಮೆರಿಕ ಕಾಂಗ್ರೆಸ್‌ನ ಅಚಲ ಬೆಂಬಲಕ್ಕಾಗಿ ಧನ್ಯವಾದಗಳು. ನಮ್ಮ ಎರಡೂ ರಾಷ್ಟ್ರಗಳು ಹಂಚಿಕೊಂಡಿರುವ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಘನತೆ-ಮೌಲ್ಯಗಳ ರಕ್ಷಣೆಯ ಹೊರತಾಗಿ ನಾವು ಇನ್ನೂ ಹೆಚ್ಚಿನದ್ದನ್ನು ಸಾಧಿಸಿದ್ದೇವೆ. ರಷ್ಯಾದ ಆಕ್ರಮಣದಿಂದ ಉಕ್ರೇನಿಯನ್ ಜನರು ಬಳಲುತ್ತಿದ್ದಾರೆ. ಆದರೆ ನಾವು ಆಕ್ರಮಣಕಾರರಿಂದ ಅರ್ಧಕ್ಕಿಂತ ಹೆಚ್ಚು ಆಕ್ರಮಿತ ಪ್ರದೇಶವನ್ನು ಮುಕ್ತಗೊಳಿಸಿದ್ದೇವೆ" ಎಂದು ಹೇಳಿದರು.
ಮುಂದುವರೆದು ಮಾತನಾಡಿ, ನಾವು ನಡೆಸಿದ ಸಭೆಯಲ್ಲಿ, ಯುದ್ಧಭೂಮಿಯ ಪರಿಸ್ಥಿತಿ ಮತ್ತು ವಾಯು ರಕ್ಷಣೆ ಸೇರಿದಂತೆ ಆದ್ಯತೆಯ ರಕ್ಷಣಾ ಅಗತ್ಯಗಳನ್ನು ಚರ್ಚಿಸಿದ್ದೇವೆ. ಯುದ್ಧದಲ್ಲಿ ಉಕ್ರೇನ್ ಗೆಲುವು ಸಾಧಿಸಲಿದೆ. ರಷ್ಯಾ ಅಥವಾ ಯಾವುದೇ ಇತರ ಸರ್ವಾಧಿಕಾರ ಕೂಡಾ ಮುಕ್ತ ಜಗತ್ತನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂಬುದು ಖಚಿತ. ಗೆಲ್ಲಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಝೆಲೆನ್ಸ್ಕಿ ಸಾಮಾಜಿಕ ಜಾಲತಾಣದಲ್ಲಿ ಈ ಗುರುವಾರ ಪೋಸ್ಟ್ ಮಾಡಿದ್ದಾರೆ. ಒಲೆನಾ ಝೆಲೆನ್ಸ್ಕಾ (ಪತ್ನಿ) ಮತ್ತು ನಾನು ಪ್ರಮುಖ ಸಭೆಗಳಿಗಾಗಿ ವಾಷಿಂಗ್ಟನ್ಗೆ ಬಂದಿದ್ದೇವೆ. ಕಳೆದ ರಾತ್ರಿ ಮತ್ತೆ ರಷ್ಯಾ ದೇಶವು ಉಕ್ರೇನ್ ಮೇಲೆ ಸಾಮೂಹಿಕ ಕ್ಷಿಪಣಿ ದಾಳಿ ನಡೆಸಿದೆ. ಈ ವೇಳೆ ಹೋರಾಡಿದ ನಮ್ಮೆಲ್ಲಾ ಸೈನಿಕರಿಗೆ ಧನ್ಯವಾದಗಳು. ರಷ್ಯಾವನ್ನು ಮಣಿಸಲು ನಾವು ಒಟ್ಟಾಗಿ ನಿಂತು ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ್ದ ಝೆಲೆನ್ಸ್ಕಿ," ಇದು ಕೇವಲ ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವಲ್ಲ. ರಷ್ಯಾವು ಜಗತ್ತನ್ನು ಯುದ್ಧಗಳಿಂದ ರಕ್ಷಿಸಲು ಇರುವ ಅಂತರರಾಷ್ಟ್ರೀಯ ಮಾನದಂಡಗಳನ್ನು ದುರ್ಬಲಗೊಳಿಸುತ್ತಿದೆ" ಎಂದು ವಾಗ್ದಾಳಿ ನಡೆಸಿದ್ದರು. (ಎಎನ್ಐ)
ಇದನ್ನೂ ಓದಿ:ಕಠಿಣ ಹಿಜಾಬ್ ಮಸೂದೆಗೆ ಇರಾನ್ ಸಂಸತ್ತು ಅಂಗೀಕಾರ: ಸಾರ್ವಜನಿಕವಾಗಿ ಸ್ಕಾರ್ಫ್ ಧರಿಸದಿದ್ದರೆ 10 ವರ್ಷದವರೆಗೆ ಜೈಲು ಶಿಕ್ಷೆ