ವಾಷಿಂಗ್ಟನ್: ಉತ್ತರ ಸೊಮಾಲಿಯಾದಲ್ಲಿ ಭಯೋತ್ಪಾದಕರ ಅಡಗುತಾಣದ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದ್ದು, ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆಯ ಹಿರಿಯ ನಾಯಕ ಬಿಲಾಲ್-ಅಲ್-ಸುಧಾನಿಯನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ದೃಢಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯಾವುದೇ ನಾಗರಿಕರಿಗೆ ಹಾನಿಯಾಗಿಲ್ಲ. ಐಸಿಸ್ನ ಹಲವು ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಆದೇಶದನುಸಾರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಮೆರಿಕ ಅಧ್ಯಕ್ಷರ ಆದೇಶಾನುಸಾರ ಜನವರಿ 25ರಂದು ಅಮೆರಿಕ ಮಿಲಿಟರಿ, ಉತ್ತರ ಸೋಮಾಲಿಯಾದಲ್ಲಿ ಕಾರ್ಯಾಚರಣೆ ನಡೆಸಿದ್ದು, ಬಿಲಾಲ್- ಆಲ್- ಸುಧಾನಿ ಸೇರಿದಂತೆ ಹಲವು ಐಸಿಸ್ ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಬಿಲಾಲ್ ಸೋಮಾಲಿಯಾದ ಐಸಿಸ್ ನಾಯಕನಾಗಿದ್ದು, ಐಸಿಸ್ ಜಾಗತಿಕ ನೆಟ್ವರ್ಕ್ನ ಪ್ರಮುಖ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆಫ್ರಿಕಾ, ಅಫ್ಘಾನಿಸ್ತಾನ್ ಸೇರಿದಂತೆ ಸಂಘಟನೆಯ ಕಾರ್ಯಚಟುವಟಿಕೆಗಳ ಬೆಳವಣಿಗೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದ ಎಂದು ಅಮೆರಿಕ ತಿಳಿಸಿದೆ.
ಈ ಕಾರ್ಯಾಚರಣೆಯಿಂದ ಅಮೆರಿಕ ಮತ್ತು ಅದರ ಭಾಗೀದಾರರು ಸುರಕ್ಷಿತವಾಗಿದ್ದಾರೆ. ಸ್ವಂತ ನೆಲ ಮತ್ತು ವಿದೇಶದಲ್ಲಿ ಅಮೆರಿಕ ಜನರು ಎದುರಿಸುತ್ತಿರುವ ಭಯೋತ್ಪಾದನೆ ಬೆದರಿಕೆಗಳಿಂದ ಅವರನ್ನು ರಕ್ಷಿಸುವ ಬದ್ಧತೆ ಅಮೆರಿಕ ಸೇನೆಗಿದೆ. ಕಾರ್ಯಾಚರಣೆಯಲ್ಲಿ ಯಾವುದೇ ನಾಗರಿಕರಿಗೆ ಹಾನಿಯಾಗಿಲ್ಲ. ಉಗ್ರ ನಿಗ್ರಹ ಕಾರ್ಯಾಚರಣೆ ಯಶಸ್ವಿಯಾಗಲು ಗುಪ್ತಚರ ಇಲಾಖೆ ಬೆಂಬಲ ನೀಡಿದ್ದು, ಅವರಿಗೆ ನಮ್ಮ ಧನ್ಯವಾದ ತಿಳಿಸುತ್ತೇವೆ ಎಂದು ಆಸ್ಟಿನ್ ಹೇಳಿದ್ದಾರೆ.