ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಅಮೆರಿಕದಲ್ಲಿ ಸಾಫ್ಟ್ವೇರ್ಗೆ ಮೊದಲ ಬಾರಿಗೆ ಪೇಟೆಂಟ್ ಪಡೆದ ಹಾಗೂ 'ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಪಿತಾಮಹ' ಎಂದೇ ಪ್ರಸಿದ್ಧಿ ಪಡೆದಿದ್ದ ಮಾರ್ಟಿನ್ ಗೊಯೆಟ್ಜ್ ನಿಧನರಾದರು. ಇವರಿಗೆ 93 ವರ್ಷ ವಯಸ್ಸಾಗಿತ್ತು.
1963ರಲ್ಲಿ ಗೊಯೆಟ್ಜ್ ತನ್ನ ಪಾಲುದಾರರೊಂದಿಗೆ ಸೇರಿ ಸಾಫ್ಟ್‌ವೇರ್ ಸಂಸ್ಥೆ ಸ್ಥಾಪಿಸಿದರು. ಈ ಸಂಸ್ಥೆಗೆ ಅಪ್ಲೈಡ್ ಡಾಟಾ ರಿಸರ್ಚ್ ಎಂದು ಹೆಸರಿಟ್ಟಿದ್ದರು. ಇಲ್ಲಿ ಗೊಯೆಟ್ಜ್ ದತ್ತಾಂಶಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದರು. ಬಳಿಕ ಈ ಸಾಫ್ಟ್ವೇರ್ಗಾಗಿ ಅವರು ಪೇಟೆಂಟ್ ಪಡೆದರು.
ಗೊಯೆಟ್ಜ್ ಸತತ ಮೂರು ವರ್ಷಗಳ ಹೋರಾಟ ನಡೆಸಿ ಬಳಿಕ ತಮ್ಮ ಸಾಫ್ಟ್ವೇರ್ಗೆ ಪೇಟೆಂಟ್ ದಕ್ಕಿಸಿಕೊಂಡಿದ್ದರು. ಇದಕ್ಕೂ ಮೊದಲು ಯುಎಸ್ ಪೇಟೆಂಟ್ ಆಫೀಸ್ನಲ್ಲಿ ಪೇಟೆಂಟ್ ನೀಡುವಂತೆ ಗೊಯೆಟ್ಜ್ ಸತತ ಹೋರಾಟ ಮಾಡಿದ್ದರು. ಅಲ್ಲಿಯವರೆಗೆ ಸಾಫ್ಟ್‌ವೇರ್ ಅನ್ನು ಪೇಟೆಂಟ್ ನೀಡುವ ವಸ್ತುವನ್ನಾಗಿ ಪರಿಗಣಿಸಲಾಗಿರಲಿಲ್ಲ. ಗೊಯೆಟ್ಜ್ ತನ್ನ ಸಾಫ್ಟ್ವೇರನ್ನು ಪೇಟೆಂಟ್ ಮಾಡಿದ ಬಳಿಕ ಐಬಿಎಂ ಸಂಸ್ಥೆಗೆ ನಕಲು ಮಾಡಲು ಮತ್ತು ಬಳಕೆ ಮಾಡಲು ಸಾಧ್ಯವಾಗಲಿಲ್ಲ.
2002ರಲ್ಲಿ ಮಿನ್ನೆಸೋಟ ವಿಶ್ವವಿದ್ಯಾಲಯದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗೊಯೆಟ್ಜ್, 1968ರ ಹೊತ್ತಿಗೆ ನಾನು ಮೂರು ವರ್ಷಗಳ ಕಾಲ ಹಕ್ಕು ಸ್ವಾಮ್ಯ (ಪೇಟೆಂಟ್) ಹೋರಾಟದಲ್ಲಿ ತೊಡಗಿದ್ದೆ. ನನ್ನ ಹೋರಾಟ ಪೇಟೆಂಟ್ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ತಿಳಿಯುತ್ತದೆ ಎಂದು ಅಂದುಕೊಂಡಿದ್ದೆ. ಸಾಫ್ಟ್‌ವೇರ್ ಪೇಟೆಂಟ್ ಪಡೆಯುವಲ್ಲಿ ನನ್ನ ಹೋರಾಟ ಇಂದು ನನ್ನನ್ನು ಸಾಫ್ಟ್‌ವೇರ್ ಚಾಂಪಿಯನ್ ಮಾಡಿದೆ ಎಂದಿದ್ದರು.