ವಾಷಿಂಗ್ಟನ್:ವಿಮಾನ ಹಾರಾಟದ ವೇಳೆ ಗಂಭೀರ ಸ್ವರೂಪದ ದುರ್ವರ್ತನೆ ತೋರಿದ 33 ವರ್ಷದ ಪುರುಷ ಪ್ರಯಾಣಿಕನನ್ನುಅಮೆರಿಕದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಯುನೈಟೆಡ್ ಏರ್‌ಲೈನ್ಸ್ ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಈ ದುಷ್ಕೃತ್ಯಕ್ಕೆ ತಡೆಯೊಡ್ಡಲು ಧಾವಿಸಿದ ಗಗನಸಖಿಯ ಕತ್ತಿಗೂ ಇರಿದಿದ್ದಾನೆ. ಲಾಸ್ ಏಂಜಲೀಸ್ ಮತ್ತು ಬೋಸ್ಟನ್ ನಡುವೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದೆ.
ಆರೋಪಿ ಲಿಯೋಮಿನ್‌ಸ್ಟರ್ ಮೂಲದವ. ಹೆಸರು ಫ್ರಾನ್ಸಿಸ್ಕೊ ಸೆವೆರೊ ಟೊರೆಸ್. ವಿಮಾನ ಹಾರಾಟಕ್ಕೆ ಅಡ್ಡಿಪಡಿಸಿದ ಮತ್ತು ವಿಮಾನ ಸಿಬ್ಬಂದಿ ಮತ್ತು ಪರಿಚಾರಕರ ಮೇಲೆ ಹಲ್ಲೆ ನಡೆಸಿದ ಆರೋಪವನ್ನು ಈತ ಎದುರಿಸುತ್ತಿದ್ದಾನೆ. ಭಾನುವಾರ ಸಂಜೆ ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೊರೆಸ್‌ನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ಟೊರೆಸ್ ಲಾಸ್ ಏಂಜಲೀಸ್‌ನಿಂದ ಬೋಸ್ಟನ್ಗೆ ಪ್ರಯಾಣಿಸುತ್ತಿದ್ದ. ಲ್ಯಾಂಡಿಂಗ್‌ಗೆ ಸುಮಾರು 45 ನಿಮಿಷಕ್ಕೆ ಮೊದಲು ಸಿಬ್ಬಂದಿ ಕಾಕ್‌ಪಿಟ್‌ನಲ್ಲಿ ಮೊದಲ ದರ್ಜೆ ಮತ್ತು ಕೋಚ್ ವಿಭಾಗಗಳ ನಡುವಿನ ಸ್ಟಾರ್‌ಬೋರ್ಡ್ ಬದಿಯ ಬಾಗಿಲು ಅನ್‌ಲಾಕ್ ಆಗಿದೆ ಎಂಬ ಎಚ್ಚರಿಕೆ ಕರೆ ಸ್ವೀಕರಿಸಿದ್ದಾರೆ. ಕೂಡಲೇ ಬಾಗಿಲ ಬಳಿ ಗಗನಸಖಿ ತೆರಳಿ ಪರಿಶೀಲಿಸಿದ್ದಾರೆ. ಆಗ ಗಗನಸಖಿ ಬಾಗಿಲಿನ ಹ್ಯಾಂಡಲ್ ಅನ್‌ಲಾಕ್ ಆಗಿರುವುದು ಗಮನಿಸಿದ್ದಾರೆ. ಟೊರೆಸ್ ಎಂಬ ಪ್ರಯಾಣಿಕ ಬಾಗಿಲ ಬಳಿ ಇದ್ದು, ತೆರೆಯಲು ಪ್ರಯತ್ನಿಸುತ್ತಿದ್ದ ಎಂದು ಗಗನಸಖಿ ಫ್ಲೈಟ್ ಕ್ಯಾಪ್ಟನ್ಗೆ ಮಾಹಿತಿ ನೀಡಿದ್ದಾರೆ.