ಮೈನೆ (ಯುಎಸ್) : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮತ್ತೊಂದು ಆಘಾತವಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ಡೊನಾಲ್ಡ್ ಟ್ರಂಪ್ ಅನರ್ಹ ಎಂದು ಕೊಲೊರಾಡೊ ಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೇ ಮೈನೆ ಉನ್ನತ ಚುನಾವಣಾ ಅಧಿಕಾರಿ ಟ್ರಂಪ್‌ರನ್ನು 2024 ರ ಮತದಾನದಿಂದಲೂ ಅನರ್ಹಗೊಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಸಂಸತ್ ಕಟ್ಟಡದ ಮೇಲೆ 2021ರಲ್ಲಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಂಪ್ ಪಾತ್ರ ವಹಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಕೊಲೊರಡೊ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನ ಬೆನ್ನಲ್ಲೇ ಮೈನೆ ಉನ್ನತ ಚುನಾವಣಾ ಅಧಿಕಾರಿ ಮಾಜಿ ಅಧ್ಯಕ್ಷರನ್ನು ರಾಜ್ಯದ 2024 ರ ಮತದಾನದಿಂದ ತೆಗೆದುಹಾಕಿದ್ದಾರೆ. ಟ್ರಂಪ್ ಅವರು ಕಚೇರಿಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿರುವ ಎರಡನೇ ರಾಜ್ಯ ಮೈನೆ ಆಗಿದೆ.
ಅಧ್ಯಕ್ಷೀಯ ಅಭ್ಯರ್ಥಿಯ ವಿರುದ್ಧದ ಇಂತಹ ಕ್ರಮವನ್ನು ಅಂಗೀಕರಿಸಿದ ಮೈನೆ ರಾಜ್ಯ ಕಾರ್ಯದರ್ಶಿ, ಡೆಮೋಕ್ರಾಟ್‌ನ ಶೆನ್ನಾ ಬೆಲ್ಲೋಸ್ ಗುರುವಾರ ಈ ಆದೇಶವನ್ನು ಹೊರಡಿಸಿದ್ದಾರೆ. ಇನ್ನೊಂದೆಡೆ, ಅಮೆರಿಕದ ಸಂವಿಧಾನದ ತೀರಾ ಅಪರೂಪಕ್ಕೆ ಬಳಸಲಾಗುವ ನಿಬಂಧನೆಯಡಿ ಅನರ್ಹಗೊಂಡ ಮೊದಲ ಅಧ್ಯಕ್ಷೀಯ ಅಭ್ಯರ್ಥಿ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾಗಿದ್ದಾರೆ.
ಈ ಕುರಿತು ಪತ್ರ ಬರೆದ ಬೆಲ್ಲೋಸ್, "ನಾನು ಈ ತೀರ್ಮಾನವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. 14ನೇ ತಿದ್ದುಪಡಿಯ ಪರಿಚ್ಛೇದ 3ರ ಆಧಾರದ ಮೇಲೆ ಯಾವುದೇ ರಾಜ್ಯ ಕಾರ್ಯದರ್ಶಿಯು ಅಧ್ಯಕ್ಷೀಯ ಅಭ್ಯರ್ಥಿಯನ್ನು ಮತಪತ್ರ ಪ್ರವೇಶದಿಂದ ವಂಚಿತಗೊಳಿಸಿಲ್ಲ ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ" ಎಂದಿದ್ದಾರೆ. ಅದರೂ, ಬೆಲ್ಲೋಸ್ ಅವರ ನಿರ್ಧಾರದ ವಿರುದ್ಧ ರಾಜ್ಯ ನ್ಯಾಯಾಲಯದಲ್ಲಿ ಟ್ರಂಪ್ ಮೇಲ್ಮನವಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ :'ಕ್ಯಾಪಿಟಲ್ ಹಿಲ್ ಮೇಲೆ ನಡೆದ ದಂಗೆಯನ್ನು ಟ್ರಂಪ್ ಬೆಂಬಲಿಸಿದ್ದಾರೆ, ಇದರಲ್ಲಿ ಸಂಶಯವೇ ಇಲ್ಲ' : ಜೋ ಬೈಡನ್