ನ್ಯೂಯಾರ್ಕ್(ಅಮೆರಿಕ): ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಎಂಬಾತನ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ವಿರುದ್ಧ ಅಮೆರಿಕ ಕಾನೂನು ಕ್ರಮ ಕೈಗೊಂಡಿದೆ. ನ್ಯೂಯಾರ್ಕ್‌ನಲ್ಲಿ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಪನ್ನು ಹತ್ಯೆಗೆ ಭಾರತೀಯನೊಬ್ಬ ಸಂಚು ರೂಪಿಸಿದ್ದಾನೆ ಎಂದು ನ್ಯಾಯಾಂಗ ಇಲಾಖೆ ಆರೋಪಿಸಿದೆ. ಈ ವ್ಯಕ್ತಿಯ ಹೆಸರು ನಿಖಿಲ್ ಗುಪ್ತಾ ಅಲಿಯಾಸ್ ನಿಕ್. ಈತನನ್ನು ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿದೆ. ನಿಖಿಲ್ ಗುಪ್ತಾ ಅವರು ಪನ್ನು ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.
ಈ ಕುರಿತು ನ್ಯೂಯಾರ್ಕ್‌ನಲ್ಲಿರುವ ಯುಎಸ್ ಅಟಾರ್ನಿ ಡೇಮಿಯನ್ ವಿಲಿಯಮ್ಸ್ ಹೇಳಿಕೆ ಬಿಡುಗಡೆಗೊಳಿಸಿದ್ದು, "ಆರೋಪಿಯು ಭಾರತದಿಂದ ನ್ಯೂಯಾರ್ಕ್ ನಗರಕ್ಕೆ ಪ್ರಯಾಣಿಸುತ್ತಿದ್ದ ಭಾರತೀಯ-ಅಮೆರಿಕನ್ ಪ್ರಜೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಹತ್ಯೆಗೊಳಗಾದ ವ್ಯಕ್ತಿ ಸಿಖ್ಖರಿಗೆ ಪ್ರತ್ಯೇಕ ಖಲಿಸ್ಥಾನ ರಚನೆಗಾಗಿ ಸಾರ್ವಜನಿಕವಾಗಿ ಪ್ರತಿಪಾದಿಸಿದ್ದಾರೆ" ಎಂದು ತಿಳಿಸಿದರು.
ಹೇಳಿಕೆಯಲ್ಲಿ ಗುರುಪತ್ವಂತ್ ಸಿಂಗ್ ಪನ್ನು ಅವರ ಹೆಸರನ್ನು ಉಲ್ಲೇಖಿಸಿಲ್ಲ. ಹೆಸರು ಬಹಿರಂಗಪಡಿಸುವಿಕೆಯಿಂದ ಈ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ನ್ಯಾಯಾಂಗ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದು, ''ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು, ನಿಖಿಲ್ ಗುಪ್ತಾ ಹತ್ಯೆಯ ಸಂಚುಗಾಗಿ ನೇಮಕವಾಗುವ ಮುನ್ನ, ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳ ಅಂತರರಾಷ್ಟ್ರೀಯ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಪನ್ನು ಎಂಬವರು ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನಿ ಚಳುವಳಿಯ ಪ್ರಮುಖ ಸದಸ್ಯರಾಗಿದ್ದಾರೆ. ಭಾರತದಿಂದ ಪಂಜಾಬ್ ಅನ್ನು ಪ್ರತ್ಯೇಕಿಸಬೇಕೆಂದು ಅವರು ಪ್ರತಿಪಾದಿಸುತ್ತಾರೆ. ಈತ ಭಾರತದಲ್ಲಿಯೂ ಗೊತ್ತುಪಡಿಸಿದ ಭಯೋತ್ಪಾದಕ'' ಎಂದು ತಿಳಿಸಿದೆ.