ನ್ಯೂಯಾರ್ಕ್(ಯುಎಸ್): ಹಿಜಾಬ್ ವಿಚಾರ ದೇಶ ಮಾತ್ರವಲ್ಲ ಪ್ರಪಂಚದಾದ್ಯಂತ ಸದ್ದು ಮಾಡ್ತಿದೆ. ಇದೀಗ ಹಿಜಾಬ್ ಹಾಕಿಕೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಇರಾನ್ ಅಧ್ಯಕ್ಷರು ಅಮೆರಿಕದ ಮಹಿಳಾ ಪತ್ರಕರ್ತರೊಬ್ಬರ ಜೊತೆ ಸಂದರ್ಶನದಲ್ಲಿ ಭಾಗಿಯಾಗಲು ಹಿಂದೇಟು ಹಾಕಿರುವ ಘಟನೆ ನಡೆದಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅಮೆರಿಕದ ಪತ್ರಕರ್ತೆ ಜೊತೆ ಸಂದರ್ಶನದಲ್ಲಿ ಭಾಗಿಯಾಗಬೇಕಾಗಿತ್ತು. ಆದರೆ, ಪತ್ರಕರ್ತೆ ಹಿಜಾಬ್ ಹಾಕಿಲ್ಲ ಎಂಬ ಕಾರಣಕ್ಕಾಗಿ ಸಂದರ್ಶನ ರದ್ದುಗೊಳಿಸಿದ್ದಾರೆ. ಇರಾನ್ನಲ್ಲಿ ಹಿಜಾಬ್ ಕಾನೂನು ತುಂಬಾ ಕಠಿಣವಾಗಿದ್ದು, ಅದೇ ಕಾರಣಕ್ಕಾಗಿ ಕಳೆದ ಕೆಲ ದಿನಗಳ ಹಿಂದೆ ಮಹಿಳೆಯೋರ್ವಳು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ನ್ಯೂಸ್ ಚಾನೆಲ್ನ ನಿರೂಪಕಿ ಕ್ರಿಸ್ಟಿಯಾನೆ ಅಮನ್ಪೋರ್ ಜೊತೆ ಇಬ್ರಾಹಿಂ ರೈಸಿ ದಿಢೀರ್ ಆಗಿ ಸಂದರ್ಶನ ರದ್ದುಗೊಳಿಸಿದ್ದು, ಇದಕ್ಕೆ ಮುಖ್ಯ ಕಾರಣ ಅವರು ಹಿಜಾಬ್ ಹಾಕಿಕೊಳ್ಳದಿರುವುದು ಎಂದು ವರದಿಯಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನ ನಡೆಯುತ್ತಿದ್ದು, ಅದರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಅವರು ಸಂದರ್ಶನವೊಂದರಲ್ಲಿ ಭಾಗಿಯಾಗಬೇಕಾಗಿತ್ತು.