ಕ್ಯಾಲಿಫೋರ್ನಿಯಾ (ಅಮೆರಿಕ) :ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರಕೃತಿಯ ರುದ್ರನರ್ತನ ಜೋರಾಗಿದೆ. 'ಹಿಲರಿ' ಚಂಡಮಾರುತ ದಕ್ಷಿಣ ಕ್ಯಾಲಿಫೋರ್ನಿಯಾ ಪ್ರವೇಶಿಸಿದೆ. ಧಾರಾಕಾರ ಮಳೆಯಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇನ್ನೊಂದೆಡೆ 5.1 ತೀವ್ರತೆಯ ಭೂಕಂಪ ಕೂಡ ಸಂಭವಿಸಿದೆ. ಪ್ರಕೃತಿಯು ಇಲ್ಲಿನ ಜನರ ಮೇಲೆ ಗದಾಪ್ರಹಾರ ನಡೆಸಿದೆ. ಇದರಿಂದ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ದಕ್ಷಿಣ ಕ್ಯಾಲಿಫೋರ್ನಿಯಾ ಪ್ರವೇಶಿಸಿರುವ ಚಂಡಮಾರುತ ಭಾರಿ ಮಳೆ ಮತ್ತು ಪ್ರವಾಹ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ಜನರು ಎಚ್ಚರಿಕೆ ವಹಿಸಬೇಕು ಎಂದು ಅಲ್ಲಿನ ಸರ್ಕಾರ ಸೂಚನೆ ನೀಡಿದೆ. ಇದರ ಜೊತೆಗೆ ಅರಿಝೋನಾ ಮತ್ತು ನೆವಾಡಾದ ಭಾಗಗಳಲ್ಲೂ ಭಾರೀ ಮಳೆ ಮತ್ತು ತೀವ್ರ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಾಸ್ ಏಂಜಲೀಸ್‌ನ ಉತ್ತರದಲ್ಲಿರುವ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಇದರ ಜೊತೆಗೆ ಚಂಡಮಾರುತ ಉಂಟಾಗಿದ್ದು, ಪ್ರವಾಹ ಭೀತಿ ಇದೆ. ಇದರಿಂದ ರಸ್ತೆಗಳು, ಭೂಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ತೀರಾ ಎಚ್ಚರ ಅಗತ್ಯವಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಹೇಳಿದೆ.
ಉಷ್ಣವಲಯದ ಮರುಭೂಮಿ ಪ್ರದೇಶದಲ್ಲಿ ವಾಸಿಸುವ ಜನರಿಗೆ ಅಪಾಯ ಹೆಚ್ಚಿದೆ. ಹೆಚ್ಚಿನ ಮಳೆಯಾಗುವುದರಿಂದ ಮರಳಿನಲ್ಲಿ ನೀರು ಇಂಗದೇ, ಅದು ಪ್ರವಾಹಕ್ಕೆ ಕಾರಣವಾಗಲಿದೆ. ಶುಷ್ಕ ಪ್ರದೇಶದಲ್ಲಿ ಕಂಡುಬರುವ ವಿರಳವಾದ ಸಸ್ಯವರ್ಗವು ಹವಾಮಾನ ಹೊಡೆತಕ್ಕೆ ಸಿಲುಕಲಿದೆ. ಇವುಗಳಿಗೆ ಮಳೆ ತಡೆಯುವ ಸಾಮರ್ಥ್ಯ ಕಡಿಮೆ ಇದೆ. ಪರಿಣಾಮ, ಕಿರಿದಾದ ಕಮರಿಗಳು ಮತ್ತು ಕಡಿದಾದ ಭೂಪ್ರದೇಶದಲ್ಲಿ ಪ್ರವಾಹದಂತೆ ನೀರು ಹರಿಯಲಿದೆ. ಅನೇಕ ಪ್ರದೇಶಗಳಲ್ಲಿ ಬಿರುಗಾಳಿ ಸಮೇತ ಭಾರಿ ವರ್ಷಧಾರೆ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮ:ರಾಜ್ಯಕ್ಕೆ ಚಂಡಮಾರುತ ಅಪ್ಪಳಿಸುವ ಮೊದಲೇ ಅಲ್ಲಿನ ಆಡಳಿತ ಮುನ್ನೆಚ್ಚರಿಕಾ ಕ್ರಮ ವಹಿಸಿದ್ದು, ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಹಿಲರಿ ಚಂಡಮಾರುತದ ಪರಿಣಾಮಗಳಿಂದ ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಚಂಡಮಾರುತವನ್ನು ಎದುರಿಸಲು ಮುಂಚಿತವಾಗಿಯೇ ಸಂಪನ್ಮೂಲಗಳ ಕ್ರೋಢೀಕರಣ, ಸುರಕ್ಷಿತ ಸ್ಥಳಕ್ಕೆ ಜನರ ರವಾನೆ ಕೈಗೊಳ್ಳಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲದಲ್ಲಿ ಭೂಕುಸಿತ:ಭಾರತದ ಹಿಮಾಚಲಪ್ರದೇಶದಲ್ಲಿ ಭಾರಿ ಮಳೆಗೆ ಭೂಕುಸಿತ ಉಂಟಾಗಿದೆ. ಆಗಸ್ಟ್ 14 ರಂದು ಶಿಮ್ಲಾ ಜಿಲ್ಲೆಯ ಸಮ್ಮರ್ ಹಿಲ್ ಪ್ರದೇಶದಲ್ಲಿನ ಶಿವಮಂದಿರ ಭೂಕುಸಿತಕ್ಕೆ ತುತ್ತಾಗಿ ಅದರಲ್ಲಿ ಸಿಲುಕಿದ್ದ 20 ಭಕ್ತರ ಪೈಕಿ 17 ಶವಗಳು ಪತ್ತೆಯಾಗಿವೆ. ಸತತ 8 ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದು ಹಿಮಾಚಲ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಬೋಧ್ ಸಕ್ಸೇನಾ ಭಾನುವಾರ ತಿಳಿಸಿದ್ದಾರೆ.
ಇದನ್ನೂ ಓದಿ:ಶಿಮ್ಲಾದ ಶಿವ ಮಂದಿರ ದುರಂತ: ಅವಶೇಷಗಳಡಿ ಇದುವರೆಗೂ 17 ಮೃತದೇಹಗಳು ಪತ್ತೆ