ಬೀಜಿಂಗ್: ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ತೈವಾನ್ ಭೇಟಿಯನ್ನು ಚೀನಾ ವಿರೋಧಿಸಿದೆ. ಜೊತೆಗೆ, ಅಮೆರಿಕಕ್ಕೆ ಕಠಿಣ ಪರಿಣಾಮದ ಎಚ್ಚರಿಕೆಯನ್ನೂ ನೀಡಿದೆ. ತೈವಾನ್ ಅನ್ನು ತನ್ನ ದೇಶದ ಭಾಗವೆಂದು ಚೀನಾ ಹೇಳುತ್ತಿದೆ. ಈ ವಿಚಾರ ಅಮೆರಿಕ ಮತ್ತು ಚೀನಾ ನಡುವೆ ದುಷ್ಮನಿಗೆ ಕಾರಣವಾಗಿದೆ.
ಚೀನಾ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯ ನಡುವೆಯೇ ತೈವಾನ್‌ಗೆ ಭೇಟಿ ನೀಡಿರುವ ನ್ಯಾನ್ಸಿ ಪೆಲೊಸಿ ಇದೀಗ ಅಲ್ಲಿಂದ ನೇರವಾಗಿ ದಕ್ಷಿಣ ಕೊರಿಯಾಗೆ ತೆರಳಿದ್ದಾರೆ. ಇದಕ್ಕೂ ಮೊದಲು ನ್ಯಾನ್ಸಿ ಪೆಲೊಸಿ ಅವರಿದ್ದ ವಿಮಾನ ತೈವಾನ್‌ನ ತಪೈನಿಂದ ಟೇಕ್ ಆಫ್ ಸಾಧ್ಯವಾಗುತ್ತದೋ ಇಲ್ಲವೋ ಎಂಬ ಚರ್ಚೆ ನಡೆದಿತ್ತು. ತೈವಾನ್ ಬಳಿಯ ವಾಯುಪ್ರದೇಶ ಬಳಸದಂತೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳಿಗೆ ಸೂಚನೆ ನೀಡಿ ಚೀನಾ ಆದೇಶಿಸಿತ್ತು. ಚೀನಾದ ಈ ಎಚ್ಚರಿಕೆಯ ನಂತರ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಮಾರ್ಗ ಬದಲಾಯಿಸಿ ಸಂಚರಿಸಿದ್ದವು.