ವಾಷಿಂಗ್ಟನ್: ಗಾಜಾದಲ್ಲಿ ಹಮಾಸ್ ಉಗ್ರಗಾಮಿ ಗುಂಪಿನೊಂದಿಗೆ ನಡೆಸುತ್ತಿರುವ ಯುದ್ಧದ ನಡುವೆಯೇ ಇಸ್ರೇಲ್‌ಗೆ 14.3 ಶತಕೋಟಿ ಡಾಲರ್ ನೆರವು ನೀಡುವ ಮಹತ್ವದ ಮಸೂದೆಯನ್ನು ರಿಪಬ್ಲಿಕನ್ ಬಹುಮತದ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿತು. ಈ ಮಸೂದೆಯನ್ನು ಗುರುವಾರ 226 ರಿಂದ 196 ಮತಗಳಿಂದ ಅಂಗೀಕರಿಸಲಾಯಿತು. ಇಬ್ಬರು ರಿಪಬ್ಲಿಕನ್ ಸದಸ್ಯರು ಮಸೂದೆ ವಿರೋಧಿಸಿದ್ದು, 12 ಡೆಮಾಕ್ರಟಿಕ್ ಸದಸ್ಯರು ಬೆಂಬಲಿಸಿದರು ಎಂದು ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇಸ್ರೇಲ್‌ಗೆ ನೆರವು ನೀಡುವ ಕುರಿತು ಅಮೆರಿಕದಲ್ಲಿ ಗದ್ದಲ ಎದ್ದಿದೆ. ಇಸ್ರೇಲ್‌ಗೆ ಸಹಾಯ ಮಾಡಲು ಅಮೆರಿಕದ ಹೌಸ್ ಆಫ್ ಕಾಮನ್ಸ್‌ನಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತಾದರೂ ಸೆನೆಟ್‌ನಲ್ಲಿ ಈ ಮಸೂದೆಯ ವಿರುದ್ಧ ಸಾಕಷ್ಟು ವಾಗ್ದಾಳಿಗಳು ನಡೆದವು. ಹೀಗಾಗಿ, ಈ ಕ್ರಮವು ಡೆಮಾಕ್ರಟಿಕ್ ಶಾಸಕರೊಂದಿಗೆ ಘರ್ಷಣೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇತ್ತೀಚೆಗೆ, ಮೈಕ್ ಜಾನ್ಸನ್ ಅವರನ್ನು ಸೆನೆಟ್ ಸ್ಪೀಕರ್ ಆಗಿ ನೇಮಿಸಲಾಗಿತ್ತು.
ಮಸೂದೆಗೆ ಡೆಮಾಕ್ರಾಟ್‌ಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಉಕ್ರೇನ್‌ಗೆ ಸಹಾಯ ಮಾಡುವ ಬಗ್ಗೆ ಅದರಲ್ಲಿ ಏನನ್ನೂ ಹೇಳಲಾಗಿಲ್ಲ. ರಷ್ಯಾದ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಹೆಚ್ಚುವರಿ ಭದ್ರತಾ ನೆರವಿನೊಂದಿಗೆ ಇಸ್ರೇಲ್‌ಗೆ ಬೆಂಬಲ ನೀಡಬೇಕೆಂದು ಸದಸ್ಯರು ಕರೆ ನೀಡಿದ್ದಾರೆ. ವರದಿಗಳ ಪ್ರಕಾರ, ಸೆನೆಟ್‌ನಲ್ಲಿರುವ ಅನೇಕ ರಿಪಬ್ಲಿಕನ್‌ಗಳು ಉಕ್ರೇನ್‌ಗೆ ಹೆಚ್ಚಿನ ನೆರವು ನೀಡುವುದನ್ನು ವಿರೋಧಿಸುತ್ತಿದ್ದಾರೆ. ಇದರಿಂದಾಗಿ ಎರಡೂ ಪಕ್ಷಗಳ ಸಂಸದರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.