ವಾಷಿಂಗ್ಟನ್(ಅಮೆರಿಕ): ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಿರಂತರ ನಡೆಸುತ್ತಿರುವ ಯೆಮೆನ್ ದೇಶದ ಹೌತಿ ಬಂಡುಕೋರರ ವಿರುದ್ಧ ಪ್ರತೀಕಾರದ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. ಗುರುವಾರ ಸತತ ಐದನೇ ಬಾರಿಗೆ ಯೆಮೆನ್‌ನಲ್ಲಿರುವ ಹೌತಿ ನೆಲೆಗಳ ಮೇಲೆ ಅಮೆರಿಕ ಬಾಂಬ್ ದಾಳಿ ಮಾಡಿದೆ ಎಂಬ ವರದಿ ಹಿನ್ನೆಲೆಯಲ್ಲಿ ಬೈಡೆನ್ ಪ್ರತಿಕ್ರಿಯಿಸಿದರು.
ಹೌತಿ ಬಂಡುಕೋರರ ನಾಯಕ ಅಬ್ದೆಲ್ ಮಾಲೆಕ್ ಅಲ್-ಹೌತಿ ಗುರುವಾರ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ, ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಪ್ರಯಾಣಿಸುವ ಹಡಗುಗಳ ಮೇಲೆ ದಾಳಿ ಮುಂದುವರೆಸುತ್ತೇವೆ. ಇಸ್ರೇಲ್ ಜೊತೆಗಿನ ಯುದ್ಧದಲ್ಲಿ ಹಮಾಸ್ ಹಾಗು ಪ್ಯಾಲೆಸ್ತೀನ್ ಬೆಂಬಲಕ್ಕಾಗಿ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದಿದ್ದಾರೆ. ಅಮೆರಿಕ ಮತ್ತು ಬ್ರಿಟನ್ ಪ್ರತೀಕಾರದ ದಾಳಿ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮಾಲೆಕ್, ಈ ಕ್ರಮಗಳಿಗೆ ನಾವು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.