ವಾಷಿಂಗ್ಟನ್(ಅಮೆರಿಕ):ಶ್ವೇತಭವನ ಭಾರತಕ್ಕೆ ಹೊಸ ರಾಯಭಾರಿಯನ್ನು ನೇಮಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಭಾರತದ ರಾಯಭಾರಿ ಸ್ಥಾನ ಅತ್ಯಂತ ಮಹತ್ವದ್ದಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಲಾಸ್ ಏಂಜಲೀಸ್ ಮೇಯರ್ ಆಗಿರುವ ಎರಿಕ್ ಗಾರ್ಸೆಟ್ಟಿ ಅವರನ್ನು ಭಾರತದ ರಾಯಭಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ. ಆದರೆ ಎರಿಕ್ ಗಾರ್ಸೆಟ್ಟಿ ಅವರ ಸಲಹೆಗಾರರಿಗೆ ಸಂಬಂಧಿಸಿದ ಲೈಂಗಿಕ ಕಿರುಕುಳ ಪ್ರಕರಣ ಮೊದಲಿಗೆ ಬಗೆಹರಿಸಲು ರಿಪಬ್ಲಿಕನ್ ಪಕ್ಷ ಒತ್ತಾಯಿಸುತ್ತಿರುವ ಕಾರಣದಿಂದ ಗಾರ್ಸೆಟ್ಟಿ ಅವರು ಭಾರತದ ರಾಯಭಾರಿಯಾಗಲು ಸ್ವಲ್ಪ ಮಟ್ಟದ ಅಡೆತಡೆಗಳು ಎದುರಾಗುತ್ತಿವೆ ಎನ್ನಲಾಗ್ತಿದೆ.
ಈ ಕುರಿತು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಮಾಧ್ಯಮಗೋಷ್ಟಿಯೊಂದರಲ್ಲಿ ಮಾಹಿತಿ ನೀಡಿದ್ದಾರೆ. ಭಾರತಕ್ಕೆ ರಾಯಭಾರಿಯ ನೇಮಕ ಮಾಡದಿರುವುದು ಅಮೆರಿಕಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆಯೇ? ರಷ್ಯಾದೊಂದಿಗೆ ಕೆಲಸ ಮಾಡದಂತೆ ಭಾರತದ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತಿದೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜೆನ್ ಪ್ಸಾಕಿ 'ಅಮೆರಿಕ ಯಾವಾಗಲೂ ದೃಢೀಕೃತ ರಾಯಭಾರಿಯನ್ನು ನೇಮಿಸಲು ಆದ್ಯತೆ ನೀಡುತ್ತದೆ. ಆ ಸ್ಥಾನ ನಿಜಕ್ಕೂ ಮಹತ್ವದ್ದಾಗಿದೆ. ಈಗಲೂ ಭಾರತದೊಂದಿಗೆ ಸಂವಹನ ನಡೆಸಲು ಅನೇಕ ಮಾರ್ಗಗಳಿವೆ' ಎಂದು ಸ್ಪಷ್ಟನೆ ನೀಡಿದ್ದಾರೆ.