ವಾಷಿಂಗ್ಟನ್ : ಸುಡಾನ್‌ನಲ್ಲಿ ಸೇನಾಪಡೆಗಳ ಮಧ್ಯೆ ಹಿಂಸಾಚಾರ ಮುಂದುವರೆದಿದ್ದು, ಖಾರ್ಟೂಮ್‌ನಿಂದ ತನ್ನ ಎಲ್ಲ ರಾಯಭಾರ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ತರಲು ಅಮೆರಿಕ ಮಿಲಿಟರಿ ಕಾರ್ಯಾಚರಣೆ ಆರಂಭಿಸಿರುವುದಾಗ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಶನಿವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅಧ್ಯಕ್ಷ ಬಿಡೆನ್, ನಮ್ಮ ರಾಯಭಾರ ಕಚೇರಿಯ ಸಿಬ್ಬಂದಿಯ ಅಸಾಧಾರಣ ಬದ್ಧತೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಅವರು ತಮ್ಮ ಕರ್ತವ್ಯಗಳನ್ನು ಧೈರ್ಯ ಮತ್ತು ವೃತ್ತಿಪರತೆಯಿಂದ ನಿರ್ವಹಿಸಿದ್ದಾರೆ ಮತ್ತು ಸುಡಾನ್ ಜನರೊಂದಿಗೆ ಅಮೆರಿಕದ ಸ್ನೇಹ ಮತ್ತು ಸಂಪರ್ಕವನ್ನು ಸಾಕಾರಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಆದೇಶದ ಮೇರೆಗೆ ಸುಡಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.
ನಮ್ಮ ರಾಯಭಾರ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತಂದ ನಮ್ಮ ಸೇನಾಪಡೆ ಯೋಧರ ಅಪ್ರತಿಮ ಕೌಶಲ್ಯಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಮ್ಮ ಈ ಕಾರ್ಯಾಚರಣೆಯ ಯಶಸ್ಸಿಗೆ ನಿರ್ಣಾಯಕ ಬೆಂಬಲ ನೀಡಿದ ಜಿಬೌಟಿ, ಇಥಿಯೋಪಿಯಾ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ನಾನು ಧನ್ಯವಾದಗಳು ಎಂದು ವೈಟ್ ಹೌಸ್ ಬಿಡುಗಡೆ ಮಾಡಿದ ಬಿಡೆನ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸುಡಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಅಧ್ಯಕ್ಷ ಬಿಡೆನ್ ತಿಳಿಸಿದ್ದಾರೆ. ಸಾಧ್ಯವಾದ ಮಟ್ಟಿಗೆ ಸುಡಾನ್‌ನಲ್ಲಿರುವ ಅಮೆರಿಕನ್ನರಿಗೆ ಸಹಾಯ ಮಾಡಲು ನನ್ನ ತಂಡ ಕೆಲಸ ಮಾಡುತ್ತಿದ್ದು, ಅದರ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದ್ದೇನೆ ಎಂದು ಅವರು ಹೇಳಿದರು.
ಸುಡಾನ್‌ನಲ್ಲಿನ ಹಿಂಸಾಚಾರದಲ್ಲಿ ಈಗಾಗಲೇ ನೂರಾರು ಮುಗ್ಧ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಮನಸ್ಸಿಗೆ ಒಪ್ಪುವಂಥದ್ದಲ್ಲ ಮತ್ತು ಇದು ನಿಲ್ಲಬೇಕು. ಯುದ್ಧಮಾಡುತ್ತಿರುವ ಗುಂಪುಗಳು ತಕ್ಷಣವೇ ಬೇಷರತ್ತಾಗಿ ಕದನ ವಿರಾಮ ಜಾರಿಗೊಳಿಸಬೇಕು. ಅಡೆತಡೆಯಿಲ್ಲದ ಮಾನವೀಯ ಪ್ರವೇಶವನ್ನು ಅನುಮತಿಸಬೇಕು ಮತ್ತು ಸುಡಾನ್ ಜನರ ಇಚ್ಛೆಯನ್ನು ಗೌರವಿಸಬೇಕು ಎಂದು ಬಿಡೆನ್ ಯುದ್ಧ ನಿರತ ಸೇನಾಪಡೆಯ ಗುಂಪುಗಳಿಗೆ ಮನವಿ ಮಾಡಿದ್ದಾರೆ.