ವಾಷಿಂಗ್ಟನ್: ಪೂರ್ವ ಸಿರಿಯಾದಲ್ಲಿ ಇರಾನ್ ಬೆಂಬಲಿತ ಗುಂಪುಗಳಿಗೆ ಸಂಬಂಧಿಸಿದ ಎರಡು ಸ್ಥಳಗಳ ಮೇಲೆ ಯುಎಸ್ ಮಿಲಿಟರಿ ವೈಮಾನಿಕ ದಾಳಿ ನಡೆಸಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಈ ದಾಳಿಗಳನ್ನು ನಡೆಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ನಿರ್ದೇಶಿಸಿದ್ದಾರೆ. ಇದರಿಂದ ಕ್ರಮವಾಗಿ ಅಬುಕಾಮಾ ಮತ್ತು ಮಾಯಾದಿನ್ ನಗರಗಳ ಬಳಿಯಿರುವ ತರಬೇತಿ ಸ್ಥಳ ಮತ್ತು ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ತಿಳಿಸಿದ್ದಾರೆ.
ಪೆಂಟಗನ್ ಮತ್ತು ಯುಎಸ್ ಅಧಿಕಾರಿಗಳ ಪ್ರಕಾರ, ಇರಾಕ್ ಮತ್ತು ಸಿರಿಯಾದಲ್ಲಿನ ಯುಎಸ್ನ ಮಿಲಿಟರಿ ನೆಲೆಗಳ ಮೇಲೆ ಹೆಚ್ಚುತ್ತಿರುವ ದಾಳಿಗಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ. ಭಯೋತ್ಪಾದಕರ ವಿರುದ್ಧ ಕೇವಲ ಎರಡು ವಾರಗಳಲ್ಲಿ ಯುಎಸ್ ಮೂರನೇ ಬಾರಿ ದಾಳಿ ಮಾಡಿದೆ. ಇದರಿಂದ ಅಬುಕಾಮಾ ಮತ್ತು ಮಾಯಾದಿನ್ ಬಳಿಯ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಈ ಪ್ರದೇಶಗಳನ್ನು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹಾಗೂ ಇರಾನ್ ಬೆಂಬಲಿತ ಭಯೋತ್ಪಾದಕರು ಬಳಸಿದ್ದರು. ಅಮೆರಿಕ ತನ್ನ ಸಿಬ್ಬಂದಿ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ಸ್ಪಷ್ಟಪಡಿಸಲು ಅಮೆರಿಕ ಅಧ್ಯಕ್ಷರು ಈ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎಂದು ಆಸ್ಟಿನ್ ಮಾಹಿತಿ ನೀಡಿದ್ದಾರೆ.