ಕರ್ನಾಟಕ

karnataka

ETV Bharat / international

ನಿಜ್ಜರ್ ಹತ್ಯೆ: ಕೆನಡಾ ತನಿಖೆ ಮುಂದುವರೆಯಲಿ, ಅಪರಾಧಿಗಳನ್ನು ನ್ಯಾಯಾಂಗ ವ್ಯಾಪ್ತಿಗೆ ತನ್ನಿ- ಅಮೆರಿಕ - Canadian investigation

ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಮುಂದುವರೆದಿದೆ. ಯುಎಸ್​ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹಾಗೂ ಕೆನಡಾದ ರಕ್ಷಣಾ ಸಚಿವ ಬಿಲ್ ಬ್ಲೇರ್ ಈ ಕುರಿತು ನೀಡಿದ ಪ್ರತಿಕ್ರಿಯೆಗಳು ಹೀಗಿವೆ.

Etv Bharat
Etv Bharat

By PTI

Published : Sep 26, 2023, 9:00 AM IST

ವಾಷಿಂಗ್ಟನ್ (ಅಮೆರಿಕ): ''ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಕುರಿತು ಕೆನಡಾ ಸರ್ಕಾರದ ತನಿಖೆ ಮುಂದುವರಿಯಬೇಕು ಹಾಗೂ ಅಪರಾಧಿಗಳನ್ನು ನ್ಯಾಯಾಂಗ ವ್ಯಾಪ್ತಿಗೆ ತರಬೇಕು'' ಎಂದು ಅಮೆರಿಕ ಹೇಳಿದೆ.

ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಅಧಿಕಾರಿಗಳ ಕೈವಾಡವಿದೆ ಎಂದು ಕೆನಡಾ ಆರೋಪಿಸಿದೆ. ಈ ಆರೋಪ ಆಧಾರರಹಿತ ಎಂದು ಭಾರತ ಈಗಾಗಲೇ ಬಲವಾಗಿ ನಿರಾಕರಿಸಿದೆ. "ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಉಲ್ಲೇಖಿಸಿರುವ ಆರೋಪಗಳಿಗೆ ನಾವು ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ. ನಾವು ನಮ್ಮ ಕೆನಡಾದ ಪಾಲುದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ" ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

"ಕೆನಡಾದ ತನಿಖೆ ಮುಂದುವರಿಯುವುದು ನಿರ್ಣಾಯಕವಾಗಿದೆ. ಅಪರಾಧಿಗಳನ್ನು ನ್ಯಾಯಾಂಗದ ವ್ಯಾಪ್ತಿಗೆ ತರಲಾಗುತ್ತದೆ ಎಂದು ನಾವು ನಂಬುತ್ತೇವೆ. ಕೆನಡಾದ ತನಿಖೆಯಲ್ಲಿ ಸಹಕರಿಸುವಂತೆ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಭಾರತ ಸರ್ಕಾರವನ್ನು ಒತ್ತಾಯಿಸಿದ್ದೇವೆ" ಎಂದು ಮಿಲ್ಲರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೆನಡಾ ರಕ್ಷಣಾ ಸಚಿವ ಬಿಲ್ ಬ್ಲೇರ್ ಹೇಳಿದ್ದೇನು?: ಕೆನಡಾ ರಕ್ಷಣಾ ಸಚಿವ ಬಿಲ್ ಬ್ಲೇರ್ ಮಾತನಾಡಿ, "ಭಾರತದೊಂದಿಗಿನ ಬಾಂಧವ್ಯ ತಮಗೆ ಮುಖ್ಯ. ನಿಜ್ಜರ ಹತ್ಯೆಗೆ ಸಂಬಂಧಿಸಿದಂತೆ ತಮ್ಮ ಬಳಿ ವಿಶ್ವಾಸಾರ್ಹ ಮಾಹಿತಿ ಇದೆ'' ಎಂದಿದ್ದಾರೆ.

''ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ಪ್ರಮುಖ ಪಾಲುದಾರ'' ಎಂದ ಅವರು, ''ದೇಶದ ಸಾರ್ವಭೌಮತ್ವ ಮತ್ತು ಅದರ ನಾಗರಿಕರ ಜೀವನವೂ ಅವರಿಗೆ ಬಹಳ ಮೌಲ್ಯಯುತವಾಗಿದೆ. ನಿಜ್ಜರ್ ಹತ್ಯೆಯ ಬಗ್ಗೆ ತಮ್ಮ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇದಕ್ಕೆ ಭಾರತ ಸಹಕರಿಸಬೇಕು" ಎಂದು ಮನವಿ ಮಾಡಿದರು.

"ನಮ್ಮ ಕಾನೂನುಗಳನ್ನು ಗೌರವಿಸುವುದು ಮತ್ತು ನಮ್ಮ ನಾಗರಿಕರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ನೈಜ ಸತ್ಯವನ್ನು ಬಯಲಿಗೆಳೆಯುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ನೆಲದಲ್ಲಿ ನಮ್ಮ ನಾಗರಿಕನನ್ನು ಕೊಲ್ಲುವುದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ" ಎಂದು ಬ್ಲೇರ್ ಹೇಳಿದರು.

2020ರಲ್ಲಿ ಭಾರತದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದ ನಿಜ್ಜರ್ ಅವರನ್ನು ಈ ವರ್ಷದ ಜೂನ್‌ನಲ್ಲಿ ಕೆನಡಾದಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದರು. ಆದರೆ, ಇದರ ಹಿಂದೆ ಭಾರತದ ಗುಪ್ತಚರ ಸಂಸ್ಥೆಗಳ ಕೈವಾಡವಿದೆ ಎಂದು ಜಸ್ಟಿನ್ ಟ್ರುಡೊ ಮಾಡಿರುವ ಆರೋಪ ವಿವಾದಾಸ್ಪದವಾಗಿದೆ. ಈ ಆರೋಪಗಳನ್ನು ಭಾರತ ಬಲವಾಗಿ ನಿರಾಕರಿಸಿತ್ತು.

ದೆಹಲಿ ಪೊಲೀಸರ ಚಾರ್ಜ್‌ಶೀಟ್:ಕೆನಡಾ ಖಲಿಸ್ತಾನ್ ಭಯೋತ್ಪಾದಕರ ಸ್ವರ್ಗ ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡುವ ಪುರಾವೆ ದೆಹಲಿ ಪೊಲೀಸರಿಗೆ ಸಿಕ್ಕಿದೆ. ಆ ದೇಶದಲ್ಲಿ ಆಶ್ರಯ ಪಡೆದಿರುವ ಅರ್ಷ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ಡಲ್ಲಾ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕ ಹೊಂದಿರುವುದು ತಿಳಿದಿದೆ. ಭಾರತದ ಪಂಜಾಬ್‌ನ ಮೋಗಾ ಜಿಲ್ಲೆಯ 27 ವರ್ಷದ ಡಲ್ಲಾ ವಿರುದ್ಧ 25ಕ್ಕೂ ಹೆಚ್ಚು ಪ್ರಕರಣಗಳಿವೆ. ಇತ್ತೀಚೆಗೆ ದೆಹಲಿ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಅವರಲ್ಲಿ ಒಬ್ಬ ಡಲ್ಲಾ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಒಪ್ಪಿಕೊಂಡರು. ಡಲ್ಲಾನ ಸೂಚನೆ ಮೇರೆಗೆ ದೆಹಲಿಯಲ್ಲಿ ಹಿಂದೂ ಹುಡುಗನನ್ನು ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಪಂಜಾಬ್‌ನಲ್ಲಿ ಅಶಾಂತಿ ಸೃಷ್ಟಿಸಲು ಡಲ್ಲಾನಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದರು ಎಂದು ಪೊಲೀಸರು ತಮ್ಮ ಚಾರ್ಜ್‌ಶೀಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಖಲಿಸ್ತಾನಿಗಳಿಗೆ ಆಶ್ರಯ; ಬೆಂಕಿಯೊಂದಿಗೆ ಸರಸವಾಡುತ್ತಿದೆ ಕೆನಡಾ

ABOUT THE AUTHOR

...view details