ವಾಷಿಂಗ್ಟನ್: ರಷ್ಯಾದ ಗಣ್ಯರನ್ನು ಗುರಿಯಾಗಿಸಿಕೊಂಡು ಅಮೆರಿಕ ಹೊಸ ನಿರ್ಬಂಧಗಳನ್ನು ಹೇರಿದೆ. ಹೊಸ ನಿರ್ಬಂಧಗಳ ಅಡಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆಳತಿಯರು ಈ ಪಟ್ಟಿಯಲ್ಲಿ ಸೇರಿಸಿರುವುದು ಈಗ ಸದ್ದು ಮಾಡುತ್ತಿದೆ. ಬೈಡನ್ ಆಡಳಿತವು ಮಾಜಿ ಒಲಿಂಪಿಕ್ ಜಿಮ್ನಾಸ್ಟ್ ಮತ್ತು ಸ್ಟೇಟ್ ಡುಮಾದ ಮಾಜಿ ಸದಸ್ಯೆ (ರಷ್ಯಾದ ಸಂಸತ್ತಿನ ಕೆಳಮನೆ) ಅಲೀನಾ ಕಬೇವಾ ಅವರ ವೀಸಾಗಳನ್ನು ಸ್ಥಗಿತಗೊಳಿಸಿದೆ. ಅಷ್ಟೇ ಅಲ್ಲ ಅವರ ಆಸ್ತಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ ಎಂದು ಅಮೆರಿಕ ಖಜಾನೆ ಇಲಾಖೆ ಹೇಳಿದೆ.
ಕಬೇವಾ ಅವರು ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಬೆಂಬಲಿಸುವ ರಷ್ಯಾದ ಮಾಧ್ಯಮ ಕಂಪನಿಯ ಮುಖ್ಯಸ್ಥರಾಗಿದ್ದಾರೆ ಎಂಬುದು ಇಲ್ಲಿ ವಿಶೇಷ. ಪುಟಿನ್ ಟೀಕಾಕಾರ ಹಾಗೂ ವಿಮರ್ಶಕ ಅಲೆಕ್ಸಿ ನವಲ್ನಿ, ಕಬೇವಾ ವಿರುದ್ಧ ನಿರ್ಬಂಧಗಳನ್ನು ಹೇರಬೇಕೆಂದು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದರು. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ಬಗ್ಗೆ ಪಾಶ್ಚಿಮಾತ್ಯ ಟೀಕೆಗಳನ್ನೇ ಪ್ರಚಾರ ಅಭಿಯಾನವಾಗಿ ಬಿಂಬಿಸುವಲ್ಲಿ ಕಬೇವಾ ಯಶಸ್ವಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಬೈಡನ್ ಆಡಳಿತ ಕಬೇವಾ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಇನ್ನು ಕಳೆದ ಮೇ ತಿಂಗಳಲ್ಲೇ ಕಬೇವಾ ವಿರುದ್ಧ ಬ್ರಿಟನ್ ನಿರ್ಬಂಧಗಳನ್ನು ಅನುಮೋದಿಸಿತ್ತು. ಅದೇ ಸಮಯದಲ್ಲಿ, ಯುರೋಪಿಯನ್ ಒಕ್ಕೂಟವು ಕಳೆದ ಜೂನ್‌ನಲ್ಲಿ ಅವರ ಮೇಲೆ ಪ್ರಯಾಣ ಮತ್ತು ಆಸ್ತಿ ಮೇಲಿನ ನಿಷೇಧವನ್ನು ಘೋಷಿಸಿತ್ತು.