ವಾಷಿಂಗ್ಟನ್:ಇಸ್ರೇಲ್ ಮೇಲೆ ದಾಳಿ ಮಾಡಿ ಸಾವಿರಾರು ಜನರ ಮಾರಣಹೋಮ ನಡೆಸಿ, ನೂರಾರು ಮಂದಿಯನ್ನು ಅಪಹರಿಸಿದ್ದ ಹಮಾಸ್ ಉಗ್ರರ ಹಣಕಾಸು ಮೂಲ ಮತ್ತು ಅದರ 10 ಗುಂಪುಗಳ ಮೇಲೆ ಅಮೆರಿಕ ಬುಧವಾರ ನಿರ್ಬಂಧ ವಿಧಿಸಿದೆ. ಇಸ್ರೇಲ್-ಹಮಾಸ್ ನಡುವಿನ ಸಂಘರ್ಷದ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ಗೆ ಭೇಟಿ ನೀಡಿ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಚರ್ಚಿಸಿದ ಬೆನ್ನಲ್ಲೇ ಈ ಘೋಷಣೆ ಹೊರಬಂದಿದೆ.
ಹಠಾತ್ ದಾಳಿ ಮಾಡಿ ವಿದೇಶಿಗರು ಸೇರಿದಂತೆ 1400ಕ್ಕೂ ಅಧಿಕ ಇಸ್ರೇಲಿಗರನ್ನು ಹತ್ಯೆ ಮಾಡಿ, ನೂರಾರು ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ ಹತ್ತು ಹಮಾಸ್ ಉಗ್ರ ಸಂಘಟನಾ ಗುಂಪು ಮತ್ತು ಗಾಜಾ, ಸುಡಾನ್, ಟರ್ಕಿ, ಅಲ್ಜೀರಿಯಾ ಮತ್ತು ಕತಾರ್ನಿಂದ ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಗಳಿಗೆ ಬರುತ್ತಿದ್ದ ಹಣಕಾಸು ಜಾಲದ ವಿರುದ್ಧವೂ ಅಮೆರಿಕ ನಿರ್ಬಂಧ ಘೋಷಿಸಿದೆ.
ಹಮಾಸ್ ಉಗ್ರ ಸಂಘಟನೆಗಳು ಮಕ್ಕಳು, ಮಹಿಳೆಯರೆನ್ನದೇ ಭೀಕರ ಹತ್ಯೆ ಮಾಡಿ ಕ್ರೂರವಾಗಿ ನಡೆದುಕೊಳ್ಳುತ್ತಿದೆ. ಇಂತಹ ಸಂಘಟನೆಗಳಿಗೆ ಅಮೆರಿಕ ಮಿತ್ರರಾಷ್ಟ್ರಗಳು ಹಣಕಾಸಿನ ನೆರವು ನೀಡುವುದನ್ನು ನಿರ್ಬಂಧಿಸಲಾಗುತ್ತದೆ. ಹಮಾಸ್ ವಿರುದ್ಧ ನಮ್ಮ ಶಸ್ತ್ರಾಸ್ತ್ರಗಳನ್ನು ಬಳಸಲೂ ಹಿಂಜರಿಯುವುದಿಲ್ಲ. ಹಮಾಸ್ಗೆ ಬರುತ್ತಿರುವ ಹಣಕಾಸಿನ ಜಾಲವನ್ನು ಕಡಿದು ಹಾಕಲಾಗುವುದು. ಹಮಾಸ್‌ನ ಭಯೋತ್ಪಾದಕ ಚಟುವಟಿಕೆಗಾಗಿ ಅಂತರರಾಷ್ಟ್ರೀಯ ವ್ಯವಸ್ಥೆಯ ಮೂಲಕ ಹಣ ಹರಿದು ಹೋಗುವುದನ್ನು ಸಹಿಸುವುದಿಲ್ಲ ಎಂದು ಅಮೆರಿಕ ಹೇಳಿದೆ.
ಇಂದು ಇಸ್ರೇಲ್ನ ಟೆಲ್ ಅವಿವ್ಗೆ ಭೇಟಿ ನೀಡಿರುವ ಅಧ್ಯಕ್ಷ ಜೋ ಬೈಡನ್ ಅವರು, ಬೆಂಜಮಿನ್ ನೆತನ್ಯಾಹು ಜತೆಗೆ ಸಭೆ ನಡೆಸಿ ಯುದ್ಧದಲ್ಲಿ ಇಸ್ರೇಲಿಗರ ಪರ ನಿಲ್ಲುವುದಾಗಿ ಘೋಷಿಸಿದರು. ಬಳಿಕ ಗಾಜಾ ಆಸ್ಪತ್ರೆಯ ಮೇಲಿನ ದಾಳಿ ಕುರಿತು ಮಾತನಾಡಿರುವ ಅವರು, ಆಸ್ಪತ್ರೆಯಲ್ಲಿ ಮಾರಣಾಂತಿಕ ಸ್ಫೋಟವನ್ನು ಇನ್ನೊಂದು ಗುಂಪು ನಡೆಸಿದೆ ಎಂದು ತೋರುತ್ತಿದೆ. ಈ ದಾಳಿಯನ್ನು ಇಸ್ರೇಲ್ ಸೇನೆ ಮಾಡಿಲ್ಲ ಎಂದರು. ದಾಳಿಯಲ್ಲಿ ಇಸ್ರೇಲ್ ಸೇನೆಯ ಕೈವಾಡವಿರದೇ, ಪ್ಯಾಲೇಸ್ಟೈನಿಯನ್ ಉಗ್ರಗಾಮಿ ಗುಂಪಾದ ಇಸ್ಲಾಮಿಕ್ ಜಿಹಾದ್ ಅನ್ನು ದೂಷಿಸುವ ಇಸ್ರೇಲ್ ನಿಲುವನ್ನು ಜೋ ಬೈಡನ್ ಒಪ್ಪಿಕೊಂಡರು.
ಗಾಜಾ ಸಂತ್ರಸ್ತರಿಗೆ ಅಮೆರಿಕ ಹಣಕಾಸು ನೆರವು:ಇಸ್ರೇಲ್ ದಾಳಿಯಿಂದಾಗಿ ಛಿದ್ರವಾಗಿರುವ ಗಾಜಾಗೆ ಇದೇ ವೇಳೆ ಅಮೆರಿಕ ಘೋಷಿಸಿದೆ. ದಾಳಿಗೀಡಾಗಿರುವ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಎರಡಕ್ಕೂ ಮಾನವೀಯ ನೆಲೆಯಲ್ಲಿ ಹಣಕಾಸಿನ ಸಹಾಯ ನೀಡಲಾಗುತ್ತಿದೆ ಎಂದು ಜೋ ಬೈಡನ್ ಇಸ್ರೇಲ್ನಲ್ಲಿ ಘೋಷಿಸಿದರು.
ಗಾಜಾದ ಜನರಿಗೆ ತುರ್ತಾಗಿ ಆಹಾರ, ನೀರು, ಔಷಧಿ, ವಸತಿ ಬೇಕಾಗಿದೆ. ನಾಗರಿಕರ ಜೀವ ಉಳಿಸಲು ನೆರವು ವಿತರಣೆಗೆ ಒಪ್ಪಿಗೆ ನೀಡುವಂತೆ ಇಸ್ರೇಲ್ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಅದು ಒಪ್ಪಿಕೊಂಡಿದೆ. ನೆರವು ನಾಗರಿಕರಿಗೆ ನೇರವಾಗಿ ಹೋಗಬೇಕು, ಹಮಾಸ್ ಉಗ್ರರಿಗೆ ಸೇರಬಾರದು. ಈಜಿಪ್ಟ್ ಮೂಲಕ ಗಾಜಾದ ಜನರಿಗೆ ಸಹಾಯ ಮಾಡಲು ಇಸ್ರೇಲ್ ಒಪ್ಪಿಕೊಂಡಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಹಮಾಸ್ ದಾಳಿಯಲ್ಲಿ ಇಸ್ರೇಲ್ ವೃದ್ಧೆಯ ಪ್ರಾಣ ಉಳಿಸಿದ ಕೇರಳದ ಮಹಿಳೆಯರು: ರಾಯಭಾರ ಕಚೇರಿಯ ಮೆಚ್ಚುಗೆ