ಕರಾಚಿ (ಪಾಕಿಸ್ತಾನ):ಭೂಗತ ಪಾತಕಿ ಮತ್ತು ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂಗೆ 'ವಿಷಪ್ರಾಶನ' ಮಾಡಿಸಲಾಗಿದ್ದು, ಆತನನ್ನು ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಆಸ್ಪತ್ರೆಯಲ್ಲಿ ದಾವೂದ್ ಇಬ್ರಾಹಿಂನನ್ನು ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.
ಭೂಗತ ಪಾತಕಿಯು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇಬ್ರಾಹಿಂ ದಾಖಲಾಗಿರುವ ಆಸ್ಪತ್ರೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಪಾತಕಿಯನ್ನು ಭೇಟಿ ಮಾಡುವವರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಕಳೆದ ಎರಡು ದಿನಗಳಿಂದ ದಾವೂದ್ ಇಬ್ರಾಹಿಂ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಮೂಲಗಳು ಹೇಳಿವೆ. ಆದ್ರೆ ಈ ವರದಿಯನ್ನು ಪಾಕಿಸ್ತಾನ ಅಥವಾ ಹೊರಗಿನ ಯಾವುದೇ ಗುಪ್ತಚರ ಸಂಸ್ಥೆಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಆಸ್ಪತ್ರೆಗೆ ದಾಖಲಾದ ನಂತರ ತೆಗೆದುಕೊಂಡ ಭದ್ರತಾ ಕ್ರಮಗಳಿಂದ ದಾವೂದ್ ಇಬ್ರಾಹಿಂ ನಿಜವಾದ ಆರೋಗ್ಯ ಸ್ಥಿತಿಯ ಮೇಲಿನ ಅನುಮಾನಗಳು ಮತ್ತಷ್ಟು ಹೆಚ್ಚಾಗಿವೆ.
ಆಸ್ಪತ್ರೆಯ ಸಂಪೂರ್ಣ ಮಹಡಿಯನ್ನೇ ಇಬ್ರಾಹಿಂಗೆ ಮೀಸಲಿಡಲಾಗಿದೆ. ಅವನ ಹತ್ತಿರದ ಕುಟುಂಬ ಸದಸ್ಯರು ಮತ್ತು ಸಂಬಂಧಪಟ್ಟ ವೈದ್ಯರನ್ನು ಹೊರತುಪಡಿಸಿ ಹೊರಗಿನಿಂದ ಯಾರಿಗೂ ಅವಕಾಶ ನೀಡುತ್ತಿಲ್ಲ. ದಾವೂದ್ ಇಬ್ರಾಹಿಂ ಆಸ್ಪತ್ರೆಗೆ ದಾಖಲಾದ ನಂತರ ಪಾಕಿಸ್ತಾನದಲ್ಲಿ ಮೌನ ಆವರಿಸಿದೆ. ಜೊತೆಗೆ ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಈ ವರ್ಷದ ಜನವರಿಯಲ್ಲಿ ದಾವೂದ್ ಇಬ್ರಾಹಿಂ ಪಾಕಿಸ್ತಾನಿ ಮಹಿಳೆಯನ್ನು ಮರುಮದುವೆ ಮಾಡಿಕೊಂಡಿದ್ದನು. ನಂತರ ಪಾಕಿಸ್ತಾನದ ಕರಾಚಿಯಲ್ಲಿ ಅಜ್ಞಾತ ಸ್ಥಳಕ್ಕೆ ಹೋಗಿದ್ದನು ಎಂಬ ವರದಿಯಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ, ದಾವೂದ್ ಇಬ್ರಾಹಿಂನ ಸೋದರಳಿಯ ಅಲಿಶಾ ಪಾರ್ಕರ್ ಎಂಬಾತ ಹೇಳಿಕೆ ನೀಡಿದ್ದನು. ದಾವೂದ್‌ನ ಕುಟುಂಬದ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದ್ದ. ಭೂಗತ ಪಾತಕಿ ತನ್ನನ್ನು ಕರಾಚಿಯ ಮತ್ತೊಂದು ಸ್ಥಳಕ್ಕೆ ಕಳುಹಿಸಿದ್ದನು ಎಂದು ಪಾರ್ಕರ್ ಹೇಳಿದ್ದಾನೆ.
ಕಳೆದ ಜುಲೈನಲ್ಲಿ, ಜಾಗತಿಕ ಭಯೋತ್ಪಾದನಾ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಹೊಂದಿರುವ ವ್ಯಕ್ತಿಯ ಆಸ್ತಿಯನ್ನು ಎನ್ಐಎ ಜಪ್ತಿ ಮಾಡಿತ್ತು. ಜೊತೆಗೆ ಶಸ್ತ್ರಾಸ್ತ್ರ ಕಳ್ಳಸಾಗಣೆ, ಭಯೋತ್ಪಾದನೆ, ಭೂಗತ ಚಟುವಟಿಕೆಗಳು, ಮಾದಕವಸ್ತು, ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣ ಸಂಗ್ರಹಿಸಲು ಪ್ರಮುಖ ಆಸ್ತಿಗಳನ್ನ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಇದರೊಂದಿಗೆ ಎಲ್‌ಇಟಿ, ಜೆಎಂ ಮತ್ತು ಅಲ್-ಖೈದಾ ಸೇರಿ ಅಂತಾರಾಷ್ಟ್ರೀಯ ಉಗ್ರರ ಸಂಘಟನೆಯೊಂದಿಗೆ ಸಕ್ರಿಯವಾಗಿ 'ಡಿ ಕಂಪನಿ' ಕಾರ್ಯನಿರ್ವಹಿಸುತ್ತಿದೆ ಎಂದು ಎನ್ಐಎ ಹೇಳಿತ್ತು.
ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಸಂಸ್ಥೆ ಆರೋಪಪಟ್ಟಿಯನ್ನೂ ಸಲ್ಲಿಕೆ ಮಾಡಿತ್ತು. ದಾವೂದ್ ಇಬ್ರಾಹಿಂ ಮತ್ತು ಆತನ ಭಯೋತ್ಪಾದಕ ನಿಧಿ ತಂಡವು ಕರಾಚಿ ವಿಮಾನ ನಿಲ್ದಾಣವನ್ನು ನಿಯಂತ್ರಿಸುತ್ತಿದೆ. ಅಲ್ಲಿ ಪಾಸ್‌ಪೋರ್ಟ್‌ನಲ್ಲಿ ಮುದ್ರೆಯಿಲ್ಲದೆ ಆಗಮನ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಭಯೋತ್ಪಾದನೆ ಸಂಬಂಧಿತ ಪ್ರಕರಣದಲ್ಲಿ ಎನ್‌ಐಎ ತನ್ನ ಚಾರ್ಜ್‌ಶೀಟ್‌ವೊಂದರಲ್ಲಿ ತಿಳಿಸಿತ್ತು.
ಇದನ್ನೂ ಓದಿ:ಕ್ರಿಸ್‌ಮಸ್ ಧಾರ್ಮಿಕ ಸಮಾರಂಭದಲ್ಲಿ ಗುಂಡಿನ ದಾಳಿ; 16 ಜನ ಸಾವು, ಅನೇಕರಿಗೆ ಗಾಯ