ಗಾಜಾ ನಗರ:ಹಮಾಸ್ ಉಗ್ರರ ಆಳ್ವಿಕೆಯಲ್ಲಿರುವ ಗಾಜಾ ನಗರ ಇಸ್ರೇಲ್ನ ಸೇಡಿನ ರಾಕೆಟ್ ದಾಳಿಗೆ ಛಿದ್ರವಾಗುತ್ತಿದೆ. ಇದು ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ 20 ಲಕ್ಷ ಪ್ಯಾಲಿಸ್ಟೀನಿಯನ್ನರ ನಿದ್ದೆಗೆಡಿಸಿದೆ. ವಿಶ್ವಸಂಸ್ಥೆ ನಿರ್ಮಿಸಿಕೊಟ್ಟಿರುವ ಆಶ್ರಯ ತಾಣಗಳ ಮೇಲೂ ಬಾಂಬ್‌ಗಳು ಬೀಳುತ್ತಿದ್ದು, ಅಲ್ಲಿನ ಜನರನ್ನು ಕಂಗೆಡಿಸಿದೆ. ಇದರಿಂದ ಜನರು ರಾಕೆಟ್ ಬಿದ್ದ ಪ್ರತಿ ಬಾರಿಯೂ ಜಾಗ ಬದಲಿಸಿ ಜೀವ ಉಳಿಸಿಕೊಳ್ಳಬೇಕಾಗಿದೆ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ನೊಳಕ್ಕೆ ನುಗ್ಗಿ ರಕ್ತಚರಿತ್ರೆ ಸೃಷ್ಟಿಸಿದ ಬಳಿಕ ಸಿಡಿದೆದ್ದಿರುವ ಇಸ್ರೇಲ್ ಪಡೆಗಳು ಗಾಜಾ ಪಟ್ಟಿಯನ್ನು ಪುಡಿಗಟ್ಟುತ್ತಿವೆ. ಸತತವಾಗಿ ರಾಕೆಟ್, ಬಾಂಬ್, ಗುಂಡಿನ ಸುರಿಮಳೆ ಸುರಿಸುತ್ತಿದ್ದು, ಅಕ್ಷರಶಃ ನರಕಸದೃಶ ವಾತಾವರಣ ನಿರ್ಮಾಣವಾಗಿದೆ. ಹಮಾಸ್ ಉಗ್ರರ ನಾಮಾವಶೇಷದ ಶಪಥ ಮಾಡಿರುವ ಇಸ್ರೇಲ್, ಗಾಜಾ ನಗರವನ್ನು ತೊರೆಯಲು ಜನರಿಗೆ ಕರೆ ನೀಡಿದೆ.
ವಿಶ್ವಸಂಸ್ಥೆಯ ಆಶ್ರಯತಾಣಗಳ ಮೇಲೂ ಬಿದ್ದ ರಾಕೆಟ್:ಗಾಜಾ ನಗರದಲ್ಲಿ ಪ್ಯಾಲೆಸ್ಟೀನಿಯನ್ ನಿರಾಶ್ರಿತರಿಗಾಗಿ ಆಶ್ರಯತಾಣಗಳನ್ನು ನಿರ್ಮಿಸಿಕೊಟ್ಟಿದ್ದು, ಅದರ ಮೇಲೂ ಬಾಂಬ್‌ಗಳು ಬಂದು ಬೀಳುತ್ತಿವೆ. ಗಾಜಾ ನಗರದ ಸುತ್ತಲೂ ದಿಗ್ಬಂಧನ ಹೇರಿರುವ ಇಸ್ರೇಲ್ ಅಲ್ಲಿಗೆ ಆಹಾರ, ನೀರು, ವಿದ್ಯುತ್ ಸರಬರಾಜು ತಡೆದಿದೆ.
16 ವರ್ಷಗಳ ಹಿಂದೆ ಇಸ್ರೇಲ್ ಮತ್ತು ಈಜಿಪ್ಟ್‌ನಿಂದ ದಿಗ್ಬಂಧನಕ್ಕೀಡಾಗಿದ್ದ ಗಾಜಾ ಅನ್ನ, ನೀರಿಲ್ಲದೇ ಸಾವಿನ ಕದ ತಟ್ಟಿತ್ತು. 2007 ರಲ್ಲಿ ಹಮಾಸ್ ಉಗ್ರಗಾಮಿ ಗುಂಪು ಈ ಪ್ರದೇಶವನ್ನು ವಶಕ್ಕೆ ಪಡೆದು, ಇಸ್ರೇಲ್ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದೆ. ಹೀಗಾಗಿ ವಿಶ್ವಸಂಸ್ಥೆ ಸುರಕ್ಷಿತ ವಲಯವನ್ನು ಗುರುತಿಸಿ ನಿರಾಶ್ರಿತರಿಗೆ ಕೆಲ ಸೌಲಭ್ಯಗಳನ್ನು ನೀಡಿ ಸಂಘರ್ಷದಿಂದ ಪಾರು ಮಾಡಿತ್ತು. ಈಗ ಆ ಜಾಗವೂ ದಾಳಿಗೆ ಒಳಗಾಗುತ್ತಿದೆ.