ವಿಶ್ವಸಂಸ್ಥೆ : ಮಹಿಳೆಯರು ಮತ್ತು ಬಾಲಕಿಯರ ಶಿಕ್ಷಣದ ಮೇಲೆ ಹೇರಿರುವ ನಿಷೇಧವನ್ನು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಮರುಪರಿಶೀಲಿಸಲಿ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್ಜಿಎ) ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಒತ್ತಾಯಿಸಿದ್ದಾರೆ. ಆಫ್ಘನ್ ಮಹಿಳೆಯರು ಮತ್ತು ಬಾಲಕಿಯರು, ಪುರುಷರಷ್ಟೇ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಅವರ ಮಾನವ ಹಕ್ಕುಗಳನ್ನು ಎತ್ತಿಹಿಡಿಯಬೇಕು ಮತ್ತು ಗೌರವಿಸಬೇಕು ಎಂದು ಫ್ರಾನ್ಸಿಸ್ ಹೇಳಿದರು. ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
"ಶಿಕ್ಷಣದ ಮೇಲಿನ ನಿಷೇಧದ ನೀತಿಯನ್ನು ಮರು ಪರಿಶೀಲಿಸುವಂತೆ ಮತ್ತು ಬಾಲಕಿಯರು ಶಾಲೆಗೆ ಹೋಗಿ ಶಿಕ್ಷಣ ಪಡೆಯಲು ಅವಕಾಶ ನೀಡುವಂತೆ ನಾನು ಆಫ್ಘನ್ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ. ಇದರಿಂದ ಅವರು ತಮ್ಮ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬಹುದು" ಎಂದು ಯುಎನ್ಜಿಎ ಅಧ್ಯಕ್ಷರು ಹೇಳಿದರು.
"ಮಹಿಳೆಯರು ಅಫ್ಘಾನಿಸ್ತಾನವನ್ನು ಬಲವಾದ ಒಗ್ಗಟ್ಟಿನ ರಾಜ್ಯವನ್ನಾಗಿ ಮಾಡುವಲ್ಲಿ ತಮ್ಮ ಕೊಡುಗೆ ನೀಡಬಹುದು. ಅವರು ಹಾಗೆ ಮಾಡಲು ಬಯಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಬಾಲಕಿಯರನ್ನು ಶಾಲೆಯಿಂದ ಹೊರಗಿಡುವ ಮೂಲಕ ಹತಾಶೆ ಭಾವನೆಯನ್ನು ಸೃಷ್ಟಿಸಬಾರದು. ಇದು ದೇಶವನ್ನು ಬಲಪಡಿಸುವ ನೀತಿಯಲ್ಲ. ಇದರಿಂದ ದೇಶ ದುರ್ಬಲವಾಗುತ್ತದೆಯೇ ಹೊರತು ಮತ್ತೇನೂ ಒಳ್ಳೆಯದಾಗುವುದಿಲ್ಲ. ಆದ್ದರಿಂದ ಅವರು ತಮ್ಮ ನೀತಿಯನ್ನು ಶೀಘ್ರದಲ್ಲೇ ಮರುಪರಿಶೀಲಿಸುವಂತೆ ನಾನು ಅವರನ್ನು ವಿನಂತಿಸುತ್ತೇನೆ." ಎಂದು ಅವರು ನುಡಿದರು.