ನ್ಯೂಯಾರ್ಕ್(ಅಮೆರಿಕ) : ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದೆ. ಇಸ್ರೇಲ್ ಗಾಜಾದ ಮೇಲೆ ತನ್ನ ಪ್ರಬಲ ದಾಳಿಯನ್ನು ಮುಂದುವರೆಸಿದೆ. ಇದರ ನಡುವೆ ಯುದ್ಧಪೀಡಿತ ಗಾಜಾದಲ್ಲಿ ಸಂತ್ರಸ್ತರು ಎದುರಿಸುತ್ತಿರುವ ಆಹಾರದ ಕೊರತೆ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಭಾರತ ಸೇರಿದಂತೆ ಅನೇಕ ದೇಶಗಳು ಗಾಜಾಪಟ್ಟಿಯಲ್ಲಿ ಯುದ್ಧದಿಂದ ನಿರಾಶ್ರಿತರಾಗಿರುವ ಜನರ ನೆರವಿಗೆ ಧಾವಿಸಿದೆ. ಇದರ ಜೊತೆಗೆ ವಿಶ್ವಸಂಸ್ಥೆಯು ನಿರಾಶ್ರಿತರ ನೆರವಿಗೆ ಧಾವಿಸಿದ್ದು, ನಾಗರಿಕರಿಗೆ ಬೇಕಾದ ಮಾನವೀಯ ನೆರವುಗಳನ್ನು ನೀಡುತ್ತಿದೆ. ಜೊತೆಗೆ ಅಗತ್ಯ ವಸ್ತುಗಳಾದ ಆಹಾರ, ಔಷಧಿಗಳನ್ನು ಪೂರೈಸುವ ಕೆಲಸವನ್ನು ಮಾಡುತ್ತಿದೆ. ಯುದ್ಧದಿಂದಾಗಿ ಗಾಜಾಪಟ್ಟಿಯಲ್ಲಿ ನಿರಾಶ್ರಿತರಾಗಿರುವ ಸರಾಸರಿ ಜನರು ವಿಶ್ವಸಂಸ್ಥೆ ಪೂರೈಸಿರುವ ಅರೇಬಿಕ್ ಬ್ರೆಡ್ನ್ನು ಅವಲಂಬಿಸಿದ್ದಾರೆ. ಗಾಜಾದ ಬೀದಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ನೀರಿಗಾಗಿ ಗಾಜಾದ ಜನರು ಪರದಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಗಾಜಾದ ನಿರ್ದೇಶಕ ಥೋಮಸ್ ವೈಟ್, ಕಳೆದ ವಾರ ಗಾಜಾದ ಉದ್ದಗಲವನ್ನು ಸಂಚರಿಸಿದ್ದೇನೆ. ಎಲ್ಲೆಡೆ ಸಾವು ಮತ್ತು ನೋವಿನ ದೃಶ್ಯಗಳು ಮಾತ್ರ ಕಾಣಸಿಗುತ್ತಿವೆ. ಯಾವ ಸ್ಥಳವೂ ಇಲ್ಲಿ ಸುರಕ್ಷಿತವಾಗಿಲ್ಲ. ಇಲ್ಲಿನ ನಾಗರೀಕರು ಜೀವ ಭಯದಿಂದ ತತ್ತರಿಸಿಹೋಗಿದ್ದಾರೆ. ವಿಶ್ವಸಂಸ್ಥೆಯ ಪ್ಯಾಲೆಸ್ಟೈನಿಯನ್ ನಿರಾಶ್ರಿತರ ಸಂಸ್ಥೆಯು (UNRWA) ಗಾಜಾದಲ್ಲಿರುವ 89 ಬೇಕರಿಗಳಿಗೆ ನೆರವು ನೀಡುವ ಮೂಲಕ ಸುಮಾರು 1.7 ಮಿಲಿಯನ್ ಜನರಿಗೆ ಆಹಾರ ಪೂರೈಸುವ ಬಗ್ಗೆ ಕಾರ್ಯಪ್ರವೃತ್ತವಾಗಿದೆ ಎಂದು ವಿಶ್ವಸಂಸ್ಥೆಯ ಪ್ರತಿನಿಧಿ ಸಭೆಯಲ್ಲಿ ಹೇಳಿದರು.
ಜನರು ಒಂದು ತುಂಡು ಬ್ರೆಡ್ಗಾಗಿ ಪರದಾಡುತ್ತಿದ್ದಾರೆ. ಗಾಜಾದ ಬೀದಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಮೂರು ನೀರಿನ ಪೂರೈಕೆ ಮೂಲಗಳಲ್ಲಿ ಕೇವಲ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಬಹುತೇಕ ನಾಗರೀಕರು ಲವಣಯುಕ್ತ ನೀರನ್ನು ಅವಲಂಬಿಸುವಂತಾಗಿದೆ ಎಂದು ಹೇಳಿದರು.