ವಿಶ್ವಸಂಸ್ಥೆ:ಇರಾಕ್‌ನ ಕೆಲ ಪ್ರದೇಶಗಳನ್ನು ಐಸಿಸ್ ಉಗ್ರರು 2014 ರಲ್ಲಿ ವಶಪಡಿಸಿಕೊಂಡ ನಂತರ ರಾಸಾಯನಿಕ ಅಸ್ತ್ರಗಳ ಅಭಿವೃದ್ಧಿ ಮತ್ತು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆ ಅಧಿಕಾರಿಗಳು ಈ ಬಗ್ಗೆ ಪುರಾವೆಗಳನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ಮಕ್ಕಳು, ಸುನ್ನಿ ಮತ್ತು ಶಿಯಾ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಾಜಿದಿಗಳ ವಿರುದ್ಧದ ಹಿಂಸಾಚಾರ ಮತ್ತು ಅಪರಾಧಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
2016 ರಲ್ಲಿ ಈಶಾನ್ಯ ಇರಾಕ್‌ನ ಕಿರ್ಕುಕ್‌ನ ಶಿಯಾ ತುರ್ಕಮೆನ್ ಪಟ್ಟಣದ ಮೇಲ ರಾಸಾಯನಿಕ ದಾಳಿ ನಡೆಸಲಾಗಿದ್ದು, ಇದರಿಂದ ಆ ಪ್ರದೇಶದಲ್ಲಿನ ಜನರು ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ವಿಶ್ವಸಂಸ್ಥೆ ತಿಳಿಸಿದೆ.
ಐಎಸ್ಐಎಲ್ ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಬಳಸಿದ ರಾಸಾಯನಿಕ ಅಸ್ತ್ರಗಳ ತನಿಖೆಗೆ ಆದ್ಯತೆ ನೀಡಲಾಗಿದೆ. ಐಎಸ್ಐಎಲ್ ಹಲವಾರು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ರೂಪಿಸಿದೆ. ರಾಕೆಟ್‌ಗಳು ಮತ್ತು ಮಾರ್ಟರ್‌ಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳಿವೆ. ಇವುಗಳನ್ನೇ ತಾಜಾ ಖುರ್ಮಾತು ಸುತ್ತಮುತ್ತಲಿನ ಪ್ರದೇಶಗಳ ವಸತಿ ಮತ್ತು ಕೃಷಿ ಕ್ಷೇತ್ರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ತನಿಖಾಧಿಕಾರಿಗಳ ತಂಡ ಹೇಳಿದೆ.
ತಾಜಾ ಖುರ್ಮಾತು ಮೇಲಾದ ದಾಳಿಯು ಐಎಸ್‌ಐಎಲ್‌ನಿಂದ ರಾಸಾಯನಿಕ ಅಸ್ತ್ರಗಳ ಮೊದಲ ಬಳಕೆಯಾಗಿದೆ. 6,000 ಕ್ಕೂ ಹೆಚ್ಚು ಜನರು ಗಾಯಕ್ಕೆ ತುತ್ತಾಗಿದ್ದಾರೆ. ಮಕ್ಕಳ ಜನನದ ಮೇಲೆ ಇದು ದುಷ್ಪರಿಣಾಮ ಬಿದ್ದಿದೆ. ಅನೇಕ ಜನರು ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ ಎಂದು ಗೊತ್ತಾಗಿದೆ. ವಿಶ್ವಸಂಸ್ಥೆಯ ತಂಡ ತಾಜಾ ಖುರ್ಮಾತುದಲ್ಲಿ ವಶಪಡಿಸಿಕೊಂಡ ಯುದ್ಧಸಾಮಗ್ರಿಗಳು, ಅವಶೇಷಗಳನ್ನ ವಿಶ್ಲೇಷಣೆಗೆ ಒಳಪಡಿಸಿದೆ.