"ಭಾರತ ಬಿಟ್ಟು ಬಂದಿರುವ ದೇವಮಾನವ ನಿತ್ಯಾನಂದರ ವಿರುದ್ಧ ದ್ವೇಷ ಹರಡುವ ಕೆಲಸ ನಡೆಯುತ್ತಿದೆ. ಇಂತಹ ಹಿಂದೂ ವಿರೋಧಿ ಗುಂಪುಗಳ ವಿರುದ್ಧ ಭಾರತ ಸರ್ಕಾರ ಕ್ರಮಕ್ಕೆ ಮುಂದಾಗಬೇಕು" ಎಂದು ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ ವಿಶ್ವಸಂಸ್ಥೆಯಲ್ಲಿ ಮನವಿ ಮಾಡಿದ್ದಾರೆ.
ನಿತ್ಯಾನಂದರ 'ಯುನೈಟೆಡ್ ಆಫ್ ಸ್ಟೇಟ್ ಕೈಲಾಸ' ದೇಶದ ಪ್ರತಿನಿನಿಧಿಯಾಗಿರುವ ಮಾ ವಿಜಯಪ್ರಿಯಾ ನಿತ್ಯಾನಂದ ಈ ಸಂಬಂಧ ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡಿದ್ದಾರೆ. ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶರು ಮತ್ತು ಕೈಲಾಸದ ವಿರುದ್ಧ ನಿರಂತರವಾಗಿ ಹಿಂಸಾಚಾರವನ್ನು ಪ್ರಚೋದಿಸಲಾಗುತ್ತಿದೆ. ಭಾರತದ ಈ ವ್ಯವಸ್ಥಿತ ಚಟುವಟಿಕೆಯನ್ನು ನಿಲ್ಲಿಸಿ, ಅವರ ಸುರಕ್ಷತೆಗೆ ರಕ್ಷಣೆ ನೀಡಬೇಕು ಎಂದು ವಿಜಯಪ್ರಿಯ ಮನವಿ ಮಾಡಿದರು. ವಿಶ್ವಸಂಸ್ಥೆಯಲ್ಲಿ ತನ್ನ ದೇಶದ ಕುರಿತು ಧ್ವನಿ ಎತ್ತಿರುವ ಈ ಪ್ರತಿನಿಧಿಯ ವಿಡಿಯೋವನ್ನು ನಿತ್ಯಾನಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಗೆ ಹಲವು ಜನರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕೈಲಾಸ ದೇಶದ ವೀಸಾಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಕೇಳಿದ್ದಾರೆ. ಮತ್ತೆ ಕೆಲವರು ಕೈಲಾಸದಲ್ಲಿ ಶಾಶ್ವತ ನಿವಾಸಕ್ಕೆ ಬೇಕಾಗುವ ದಾಖಲಾತಿ ಕುರಿತು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಭಾರತದಲ್ಲಿ ಇದೀಗ ಜಿ20 ಶೃಂಗಸಭೆ ನಡೆಸಲಾಗುತ್ತಿದೆ. ಕೈಲಾಸ ದೇಶವನ್ನು ಸೇರಿಸುವ ಮೂಲಕ ಇದನ್ನು ಜಿ21 ಆಗಿ ಮಾಡಿ. ಕೈಲಾಸವನ್ನು ಅಖಂಡ ಭಾರತದ ಭೂಪಟಕ್ಕೆ ಸೇರಿಸಿ ಎಂದಿದ್ದಾರೆ. ನಿತ್ಯಾನಂದರ ದೇಶದ ಕುರಿತು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಪ್ರತಿನಿಧಿಯ ಧಿರಿಸಿನ ಹಂಚಿಕೊಂಡಿರುವ ಮತ್ತೊಬ್ಬರು, ಕೈಲಾಸದಲ್ಲಿ ಮಹಿಳೆಯರು ಡ್ರೆಸ್ ಕೋಡ್ ಹೀಗೆಯೇ ಇರುತ್ತದೆಯೇ ಎಂದಿದ್ದಾರೆ. ಈ ಹಿಂದೆ ನಿತ್ಯಾನಂದರ ವಿರುದ್ಧ ಕೇಳಿ ಬಂದ ಅತ್ಯಾಚಾರ ಆರೋಪದಲ್ಲಿ ಅವರು, ಪುರುಷ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಿದ್ದರ ಹಳೆ ವಿಡಿಯೋಗಳನ್ನು ಕೂಡ ಕೆಲವರು ಕೆದಕಿ ಹಂಚಿಕೊಂಡಿದ್ದಾರೆ.