ಬರ್ಲಿನ್ (ಜರ್ಮನಿ): ಜಗತ್ತಿನಾದ್ಯಂತ ಆಹಾರ ಕೊರತೆಯಿಂದ ಮಹಾ ದುರಂತವನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯಾ ಗುಟೇರೆಸ್ ಎಚ್ಚರಿಸಿದ್ದಾರೆ. ಅಲ್ಲದೇ, ರಸಗೊಬ್ಬರ ಮತ್ತು ವಿದ್ಯುತ್ ಬೆಲೆ ಏರಿಕೆಯಿಂದ ಪ್ರಪಂಚದಾದ್ಯಂತ ರೈತರು ತೊಂದರೆಗೆ ಸಿಲುಕಿದ್ದಾರೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬರ್ಲಿನ್ನಲ್ಲಿ ನಡೆದ ಶ್ರೀಮಂತ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಅಧಿಕಾರಿಗಳ ಸಭೆಯಲ್ಲಿ ವಿಡಿಯೋ ಸಂದೇಶ ನೀಡಿದ ಅವರು, ಈಗಾಗಲೇ ಹವಾಮಾನ ವೈಪರೀತ್ಯ, ಕೊರೊನಾ ಹಾವಳಿ ಹಾಗೂ ಹೆಚ್ಚುತ್ತಿರುವ ಅಸಮತೋಲನ ಕಾರಣದಿಂದ ಕೋಟ್ಯಂತರ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಹೊಸದಾಗಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದು ಆಹಾರದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದರು.