ಉಕ್ರೇನ್ನಲ್ಲಿ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಮುಂದುವರೆದಿದೆ. ಈಗಾಗಲೇ ಸಾವಿರಾರು ಅಮಾಯಕರು ಸೇರಿದಂತೆ ಅನೇಕ ಸೈನಿಕರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ರೆ ಇದಕ್ಕೆ ತದ್ವಿರುದ್ಧವಾಗಿ ವಿಶೇಷ ಲವ್‌ಸ್ಟೋರಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಪ್ರೀತಿಗೆ ಎಲ್ಲರೂ ಶುಭ ಹಾರೈಸಿದ್ದಾರೆ.
ಹೌದು, ಎಲ್ವಿವ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಲಿಸಿಚಾನ್ಸ್ಕ್‌ನ ನರ್ಸ್ ಒಕ್ಸಾನಾ ಬಾಲಂಡಿನಾ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಒಕ್ಸಾನಾ ಅವರು ವಿಕ್ಟರ್ ವಾಸಿಲಿವ್ ಎಂಬುವರನ್ನು ವಿವಾಹವಾಗಿದ್ದು, ಮಾರ್ಚ್ 27 ರಂದು 23 ವರ್ಷದ ಈ ನವದಂಪತಿ ಮನೆಗೆ ಹಿಂದಿರುಗುತ್ತಿದ್ದಾಗ ಗಣಿಯಲ್ಲಿ ಸ್ಫೋಟ ಸಂಭವಿಸಿದೆ. ಪರಿಣಾಮ, ಒಕ್ಸಾನಾ ನಾಲ್ಕು ಕೈ ಬೆರಳುಗಳು ಹಾಗೂ ಎರಡೂ ಕಾಲು ಕಳೆದುಕೊಂಡು ಜೀವವೇ ಬೇಡ ಎಂಬ ಸ್ಥಿತಿಗೆ ತಲುಪಿದ್ದರು. ಆದ್ರೆ, ನಿಜವಾದ ಪ್ರೀತಿಗೆ ಸಾವು-ಸೋಲಿಲ್ಲ ಎಂಬಂತೆ ಒಕ್ಸಾನಾರನ್ನು ವಿಕ್ಟರ್ ವಾಸಿಲಿನ್ ಎತ್ತಿಕೊಂಡು ನೃತ್ಯ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ..
ಸ್ಫೋಟ ಸಂಭವಿಸಿದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಬಾಲಂಡಿನಾ, ನಾನು ಅವರಿಗೆ ಕೂಗಿ ಹನಿ, ನೋಡಿ.. ಎನ್ನುತ್ತಿದ್ದಂತೆ ಗಣಿ ಸ್ಫೋಟಗೊಂಡಾಗ ಅವರು ನನ್ನತ್ತ ನೋಡಿದರು. ನಾನು ನೆಲದ ಮೇಲೆ ಮುಖ ಮಾಡಿ ಕೆಳಗೆ ಬಿದ್ದೆ. ವಿಪರೀತ ಶಬ್ಧದಿಂದಾಗಿ ನನ್ನ ತಲೆ ಗಿರ್ ಎನ್ನುತ್ತಿತ್ತು. ಗಾಳಿಯ ವೇಗ ಹೆಚ್ಚಿರದ ಕಾರಣ ನನಗೆ ಉಸಿರಾಡಲು ಯಾವುದೇ ರೀತಿಯ ತೊಂದರೆ ಆಗಲಿಲ್ಲ.
ನನಗೆ ಇಬ್ಬರು ಮಕ್ಕಳಿದ್ದಾರೆ. ಘಟನೆಯ ಬಳಿಕ ಬದುಕಲು ಇಷ್ಟವಿರಲಿಲ್ಲ, ನನ್ನ ಕುಟುಂಬದಲ್ಲಿ ಯಾರಿಗೂ ಹೊರೆಯಾಗಲು ನಾನು ಬಯಸುವುದಿಲ್ಲ ಎಂದು ಯೋಚಿಸಿದೆ. ಆದರೆ ನಿಮ್ಮ ಬೆಂಬಲಕ್ಕೆ ನನ್ನ ಧನ್ಯವಾದಗಳು, ನಾನು ಬದುಕಬೇಕು. ಇದು ಜೀವನದ ಅಂತ್ಯವಲ್ಲ. ದೇವರು ನನ್ನನ್ನು ಜೀವಂತವಾಗಿ ಇಟ್ಟಿದ್ದಾನೆ, ಅದು ನನ್ನ ಅದೃಷ್ಟ ಎಂದು ಬಾಲಂಡಿನಾ ಹೇಳಿದರು.
ಘಟನೆ ಕುರಿತು ಮಾತನಾಡಿರುವ ಪತಿ ವಿಕ್ಟರ್ ವಾಸಿಲಿವ್, "ಈ ಘಟನೆ ಸಂಭವಿಸಿದಾಗ ಅದು ನನಗೆ ಒಂದು ನಿಮಿಷದಂತೆ ಭಾಸವಾಯಿತು. ಅವಳು ಗಾಯಗೊಂಡಳು. ಒಕ್ಸಾನಾ ಹೊರತಾಗಿ ಬೇರೆ ಯಾರೇ ಆಗಿದ್ದರೂ, ಏನಾಗುತ್ತಿದ್ದರು ಎಂಬುದನ್ನು ನನಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಅವಳು ತುಂಬಾ ಬಲಶಾಲಿ. ಅವಳು ಮೂರ್ಛೆ ಹೋಗಲಿಲ್ಲ. ಘಟನೆ ಸಂಭವಿಸಿದಾಗ ನಾನು ಹತಾಶನಾಗಿಬಿಟ್ಟೆ, ಏನು ಮಾಡಬೇಕೆಂದು ನನಗೆ ತೋಚಲಿಲ್ಲ. ಅವಳು ಸ್ಥಿರವಾಗಿರುವುದನ್ನು ನಾನು ಗಮನಿಸಿದೆ" ಎಂದು ಹೇಳಿದರು. ಒಕ್ಸಾನಾ ಅವರ 7 ವರ್ಷದ ಮಗ ಹಾಗೂ 5 ವರ್ಷದ ಮಗಳು ಈಗ ಮಧ್ಯ ಉಕ್ರೇನ್‌ನ ಪೋಲ್ಟವಾ ಪ್ರದೇಶದಲ್ಲಿ ಇರುವ ತಮ್ಮ ಅಜ್ಜಿಯರೊಂದಿಗೆ ಸುರಕ್ಷಿತವಾಗಿದ್ದಾರೆ.