ಕೀವ್: ರಣರಂಗವಾಗಿ ಮಾರ್ಪಟ್ಟಿರುವ ಉಕ್ರೇನ್‌ನಲ್ಲಿ ಈಗ ಸಾವಿರಾರೂ ಪ್ರೇಮ ಜೋಡಿಗಳು ಮದುವೆಯಾಗುತ್ತಿದ್ದಾರೆ. ರಷ್ಯಾದ ಯುದ್ಧದಿಂದ ಜೀವನವೇ ಬದಲಾಗುತ್ತಿದೆ. ಸಾವೋ - ಬದುಕೋ.. ಯಾವುದಾದರೂ ಸರಿ ಇದ್ದಷ್ಟು ದಿನ ಒಂದಾಗಿ ಬಾಳುವ ನಿರ್ಧಾರಕ್ಕೆ ಪ್ರೇಮಿಗಳು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಉಕ್ರೇನಿನ ರಾಜಧಾನಿ ಕೀವ್ನಲ್ಲಿಯೇ ಸುಮಾರು 4,000 ಜೋಡಿಗಳು ಪ್ರೇಮ ವಿವಾಹವಾಗಿದ್ದಾರೆ.
ಈ ಪ್ರೇಮವ ಈಗ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದೆ. ಕೆಲವು ಸೈನಿಕರು ಯುದ್ಧಕ್ಕೆ ಹೋಗುವ ಮೊದಲು ಮದುವೆಯಾಗುತ್ತಿರುವುದು ವಿಶೇಷ. ಇನ್ನು ಕೆಲವರು ಮುಂದೇನಾಗುತ್ತದೋ ಎಂಬ ಭಯದಿಂದ ಬೇಗನೇ ಮದುವೆಯಾಗಿದ್ದಾರೆ. ಕೆಲವು ದಿನಗಳ ಕಾಲ ಒಟ್ಟಿಗೆ ವಾಸಿಸುವ ಆಲೋಚನೆಯೊಂದಿಗೆ ಈ ಲವ್ಬರ್ಡ್ಸ್ಗಳು ಒಂದಾಗುತ್ತಿದ್ದಾರೆ.
ಎಲ್ಲವೂ ಕೂಡಿ ಬಂದರೆ... ನಮ್ಮ ಬದುಕನ್ನು ದಂಪತಿಯಾಗಿ ಮುಂದುವರಿಸುತ್ತೇವೆ. ಇಲ್ಲದಿದ್ದರೆ ಗಂಡ - ಹೆಂಡತಿಯರಾಗಿಯೇ ಸಾಯುತ್ತೇವೆ ಎಂದು ಉಕ್ರೇನಿಯನ್ ದಂಪತಿಗಳಾದ ಇಹೋರ್ ಜಕ್ವಾಟ್ಸಿಕ್ ಮತ್ತು ಕ್ಯಾಥರೀನ್ ಲೈಟ್ವಿನೆಂಕೊ ಹೇಳಿದರು. ಈ ಜೋಡಿ ಕೀವ್‌ನ ಚರ್ಚ್‌ವೊಂದರಲ್ಲಿ ಉಂಗುರ ಬದಲಿಸಿಕೊಳ್ಳುವ ಮೂಲಕ ಪ್ರೇಮ ವಿವಾಹವಾದರು.
ಓದಿ:ರಷ್ಯಾದೊಂದಿಗಿನ ತಂದೆಯ ಹೋರಾಟದ ನಡುವೆಯೂ ದೇಶಕ್ಕೆ ಪದಕ ಗೆದ್ದಕೊಟ್ಟ ಉಕ್ರೇನಿನ ಯುವ ಈಜು ಸ್ಪರ್ಧಿ!
ಯುದ್ಧದ ಹಿನ್ನೆಲೆ ಉಕ್ರೇನ್‌ನಲ್ಲಿ ಪ್ರಸ್ತುತ ಮಾರ್ಷಲ್ ಕಾನೂನು ಜಾರಿಯಲ್ಲಿದ್ದು, ಸೈನಿಕರು ಮತ್ತು ನಾಗರಿಕರ ವಿವಾಹಗಳನ್ನು ಅನುಮತಿಸಲಾಗಿದೆ. ಅರ್ಜಿ ಸಲ್ಲಿಸಿದ ದಿನದಂದೇ ಮದುವೆಯಾಗಲು ಇಲ್ಲಿನ ಆಡಳಿತ ಅವಕಾಶವನ್ನು ಒದಗಿಸಿದೆ. ಸಾಮಾನ್ಯ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ಮದುವೆ ನಡೆಯಬೇಕಿತ್ತು. ಯುದ್ಧ ಪ್ರಾರಂಭವಾದ 3 ತಿಂಗಳವರೆಗೆ ಮದುವೆ ನೋಂದಣಿಗಳು ನಡೆಯಲಿಲ್ಲ. ಇತ್ತೀಚೆಗೆ ಕೀವ್‌ನಲ್ಲಿ ಕೇಂದ್ರ ನಾಗರಿಕ ನೋಂದಣಿ ಸಂಪೂರ್ಣವಾಗಿ ಲಭ್ಯವಾಯಿತು.