ಉಕ್ರೇನ್ ಮೇಲೆ ರಷ್ಯಾ ಸತತ 3 ತಿಂಗಳಿಂದ ಯುದ್ಧ ಮಾಡುತ್ತಿದ್ದು, ಯುದ್ಧ ಅಂತ್ಯ ಕಾಣುವ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೇ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ಗೆ ಶಸ್ತ್ರಾಸ್ತ್ರ ಸಹಾಯ ಮಾಡುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಬೆಲೆ ತೆರಬೇಕಾದೀತು ಎಂದು ನ್ಯಾಟೋ ಮುಖ್ಯಸ್ಥ ಜೇನ್ ಸ್ಟಾಲೆನ್‌ಬರ್ಗ್ ಎಚ್ಚರಿಸಿದ್ದಾರೆ.
ರಷ್ಯಾ- ಉಕ್ರೇನ್ ಕುರಿತು ಕೆಲ ದಿನಗಳ ಹಿಂದಷ್ಟೇ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಮಾತನಾಡಿ, 'ಸಾಮೂಹಿಕ ದೀರ್ಘ ಯುದ್ಧಕ್ಕೆ ಸಿದ್ಧರಾಗಬೇಕಿದೆ' ಎಂದು ಹೇಳಿದ ಬಳಿಕ ನ್ಯಾಟೋ ಮುಖ್ಯಸ್ಥರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಈ ಯುದ್ಧದಿಂದ ಉಕ್ರೇನ್ ಭಾರಿ ಬೆಲೆ ತೆರಬೇಕಿದೆ. ಯುದ್ಧ ಸಾರಿರುವ ರಷ್ಯಾ ಕೂಡ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟಕ್ಕೀಡಾಗಲಿದೆ. ಮುಂಬರುವ ವರ್ಷಗಳಲ್ಲಿ ಉಕ್ರೇನ್‌ನ ಪರ ನಿಲ್ಲಲು ಪಶ್ಚಿಮ ದೇಶಗಳು ಸಜ್ಜಾಗಬೇಕು ಎಂದು ನ್ಯಾಟೋ ಮುಖ್ಯಸ್ಥ ಜೇನ್ ಸ್ಟಾಲೆನ್‌ಬರ್ಗ್ ಹೇಳಿದ್ದಾರೆ.
ಯುದ್ಧದಿಂದಾಗಿ ಇಂಧನ, ಆಹಾರ ಸಾಮಗ್ರಿ, ಇತರೆ ಪದಾರ್ಥಗಳ ಬೆಲೆ ಏರಿಕೆ ಗಗನಮುಖಿಯಾಗಿವೆ. ಯುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರತೆಯನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಿದ್ದಾರೆ.
ಮತ್ತಷ್ಟು ಶಸ್ತ್ರಾಸ್ತ್ರಕ್ಕೆ ಉಕ್ರೇನ್ ಮನವಿ:ರಷ್ಯಾದ ದಾಳಿಯನ್ನು ಸಮರ್ಥವಾಗಿ ಎದುರಿಸಲು ಪಶ್ಚಿಮ ರಾಷ್ಟ್ರಗಳು ತಮಗೆ ಇನ್ನಷ್ಟು ಶಸ್ತ್ರಾಸ್ತ್ರ ನೆರವು ನೀಡಬೇಕು ಎಂದು ಉಕ್ರೇನ್ ಕೋರಿಕೆ ಸಲ್ಲಿಸಿದೆ. ರಕ್ಷಣಾ ಸಚಿವ ಒಲೆಕ್ಸಿ ರೆಸ್ನಿಕೋವ್ ಅವರು, ಬ್ರಸೆಲ್ಸ್‌ನಲ್ಲಿ ಎಲ್ಲಾ ಪಡೆಗಳ ನಾಯಕರು ಸೇರಿ ಉಕ್ರೇನ್ಗೆ ಸಹಾಯ ಮಾಡಲು ನಿರ್ಧರಿಸಬೇಕು. ಇಲ್ಲಿಯವರೆಗೂ ನೀಡಿದ ಶಸ್ತ್ರಾಸ್ತ್ರಗಳು ದೇಶದ ರಕ್ಷಣೆಗೆ ಸಾಕಾಗದು ಎಂದಿದ್ದಾರೆ.
ರಷ್ಯಾ ಮೇಲೆ ಲಿಥುವೇನಿಯಾ ನಿರ್ಬಂಧ:ಬಾಲ್ಟಿಕ್ ಪ್ರದೇಶದಲ್ಲಿ ಸರಕು ಸಾಗಣೆಗೆ ಅತ್ಯಂತ ಪ್ರಮುಖವಾದ ಕಲಿನಿನ್‌ಗ್ರಾಡ್ ಪ್ರದೇಶವನ್ನು ನಿರ್ಬಂಧಿಸಿದ ಲಿಥುವೇನಿಯಾ ರಷ್ಯಾಗೆ ಶಾಕ್ ನೀಡಿದೆ. ಈ ಮಾರ್ಗದಲ್ಲಿ ಇನ್ನು ಮುಂದೆ ರಷ್ಯಾದ ಸರಕು ಸಾಗಣೆ ಮಾಡುವುದನ್ನು ದೇಶ ನಿರ್ಬಂಧಿಸಿದೆ ಎಂದು ಘೋಷಿಸಿದೆ. ಇದನ್ನು ಟೀಕಿಸಿರುವ ರಷ್ಯಾ, ಕಲಿನಿನ್‌ಗ್ರಾಡ್‌ನ ಗವರ್ನರ್ ಸರ್ಕಾರವು ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಇದರಿಂದಾಗಿ ಸೇಂಟ್ ಪೀಟರ್ಸನ್ಬರ್ಗ್ನಿಂದ ಜಲಮಾರ್ಗಗಳ ಮೂಲಕ ಸರಕುಗಳನ್ನು ಸಾಗಿಸಲಾಗುತ್ತಿದೆ.
ಓದಿ:ಸ್ಪೈಸ್ಜೆಟ್ ರೆಕ್ಕೆಯಲ್ಲಿ ಬೆಂಕಿ: ತುರ್ತು ಭೂಸ್ಪರ್ಶಿಸಿದ ವಿಮಾನ, 185 ಪ್ರಯಾಣಿಕರು ಸೇಫ್