ಕೀವ್, ಉಕ್ರೇನ್:ರಷ್ಯಾ ವಿರುದ್ಧ ಉಕ್ರೇನ್ ಮತ್ತೊಮ್ಮೆ ಗಂಭೀರ ಆರೋಪ ಮಾಡಿದೆ. ಉಕ್ರೇನ್‌ನ ಖೆರ್ಸನ್ ಪ್ರದೇಶದಲ್ಲಿ ಭಾನುವಾರ ನಡೆದ ರಷ್ಯಾದ ಶೆಲ್ ದಾಳಿಗೆ ನವಜಾತ ಶಿಶು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ನಾಯಕರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ನಡೆದ ಶೆಲ್ ದಾಳಿಯಲ್ಲಿ 23 ದಿನದ ಮಗು, ಆ ಮಗುವಿನ 12 ವರ್ಷದ ಸಹೋದರ ಮತ್ತು ಪೋಷಕರು ಸಾವನ್ನಪ್ಪಿದ್ದಾರೆ ಎಂದು ಖೆರ್ಸನ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ.
ಟೆಲಿಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡ ಖೆರ್ಸನ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಪ್ರೊಕುಡಿನ್, ರಷ್ಯಾ ದಾಳಿಗೆ ಕುಟುಂಬವೊಂದು ಬಲಿಯಾಗಿದೆ. ಪುಟ್ಟ ಸೋಫಿಯಾಗೆ ಕೇವಲ 23 ದಿನಗಳು, ಆಕೆಯ ಸಹೋದರ ಆರ್ಟೆಮ್‌ಗೆ 12 ವರ್ಷ ಮತ್ತು ಇವರೊಂದಿಗೆ ತಂದೆ ಮತ್ತು ತಾಯಿ ಶೆಲ್ ದಾಳಿಗೆ ತುತ್ತಾಗಿದ್ದಾರೆ. ಅಷ್ಟೇ ಅಲ್ಲ ಸ್ಟಾನಿಸ್ಲಾವ್ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಕ್ರಿಶ್ಚಿಯನ್ ಪಾದ್ರಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಕ್ರಿಶ್ಚಿಯನ್ ಚರ್ಚ್ನ ಪಾದ್ರಿ ಮೈಕೋಲಾ ಟಚಿಶ್ವಿಲಿ ಮತ್ತು ಅವರ ಸಹ ಗ್ರಾಮಸ್ಥರು ಶತ್ರುಗಳ ದಾಳಿಗೆ ಬಲಿಯಾಗಿದ್ದಾರೆ ಎಂದು ಒಲೆಕ್ಸಾಂಡರ್ ಪ್ರೊಕುಡಿನ್ ಮಾಹಿತಿ ನೀಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಖಾರ್ಕಿವ್‌ನ ಕುಪಿಯಾನ್ಸ್ಕ್ ಜಿಲ್ಲೆಯಿಂದ 36 ಮಕ್ಕಳು ಸೇರಿದಂತೆ 111 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಖಾರ್ಕಿವ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಹ್ ಸಿನಿಹುಬೊವ್ ಹೇಳಿದ್ದಾರೆ. ಸ್ಥಳೀಯ ಅಧಿಕಾರಿಗಳು ಆಗಸ್ಟ್ 9 ರಂದು ಸ್ಥಳಾಂತರಿಸುವ ಆದೇಶವನ್ನು ನೀಡಿದ್ದರು. ಅಂದಿನಿಂದ 71 ಮಕ್ಕಳು ಸೇರಿದಂತೆ 204 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸಿನಿಹುಬೊವ್ ಮಾಹಿತಿ ನೀಡಿದ್ದಾರೆ.