ಕೀವ್ (ಉಕ್ರೇನ್) :ರಷ್ಯಾ ವಿರುದ್ಧ ತನ್ನ ದೇಶವು ಬಹುನಿರೀಕ್ಷಿತ ಪ್ರತಿದಾಳಿಯನ್ನು ಪ್ರಾರಂಭಿಸಿರುವುದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೃಢಪಡಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರತಿದಾಳಿ ಮತ್ತು ರಕ್ಷಣಾತ್ಮಕ ದಾಳಿಗಳು ನಡೆಯುತ್ತಿವೆ ಎಂದು ಝೆಲೆನ್ಸ್ಕಿ ಶನಿವಾರ ಹೇಳಿದ್ದಾರೆ. ಆದರೆ ಪ್ರತಿದಾಳಿಗಳು ಯಾವ ಹಂತದಲ್ಲಿವೆ ಅಥವಾ ಯಾವ ಪ್ರದೇಶದಲ್ಲಿ ನಡೆಯುತ್ತಿವೆ ಎಂಬುದನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಉಕ್ರೇನ್‌ನ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಹೋರಾಟ ಉಲ್ಬಣಗೊಂಡ ನಂತರ ಮತ್ತು ಉಕ್ರೇನ್ ಪಡೆಗಳು ಮುನ್ನುಗ್ಗಿವೆ ಎಂಬ ವರದಿಗಳ ನಂತರ ಉಕ್ರೇನ್ ಅಧ್ಯಕ್ಷರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಉಕ್ರೇನಿಯನ್ ಪಡೆಗಳು ಪೂರ್ವದಲ್ಲಿ ಬಖ್ಮುಟ್ ಬಳಿ ಮತ್ತು ದಕ್ಷಿಣದಲ್ಲಿ ಝಪೊರಿಝಿಯಾ ಬಳಿ ಮುನ್ನಡೆ ಸಾಧಿಸಿವೆ ಮತ್ತು ರಷ್ಯಾದ ಗುರಿಗಳ ಮೇಲೆ ದೂರದಿಂದ ದಾಳಿಗಳನ್ನು ನಡೆಸಿದೆ ಎಂದು ವರದಿಯಾಗಿದೆ.
ಆದರೆ ಯುದ್ಧಭೂಮಿಯಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದನ್ನು ನಿರ್ಣಯಿಸುವುದು ಕಷ್ಟಕರವಾಗಿದೆ. ಯುದ್ಧ ನಿರತ ಉಕ್ರೇನ್ ಹಾಗೂ ರಷ್ಯಾ ದೇಶಗಳು ಯುದ್ಧದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವರದಿ ನೀಡುತ್ತಿವೆ. ತಾನು ರಷ್ಯಾ ವಿರುದ್ಧ ಮೇಲುಗೈ ಸಾಧಿಸಿದ್ದೇನೆ ಎಂದು ಉಕ್ರೇನ್ ಪ್ರತಿಪಾದಿಸುತ್ತಿದ್ದರೆ, ಉಕ್ರೇನ್ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದೇವೆ ಎಂದು ರಷ್ಯಾ ಹೇಳುತ್ತಿದೆ. ಯುದ್ಧ ಪರಿಸ್ಥಿತಿಯ ಬಗ್ಗೆ ವೀಡಿಯೊ ಸಂದರ್ಶನದಲ್ಲಿ ಮಾತನಾಡಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನಿಯನ್ ಪಡೆಗಳು ಖಂಡಿತವಾಗಿಯೂ ತಮ್ಮ ಆಕ್ರಮಣ ಪ್ರಾರಂಭಿಸಿವೆ. ಆದರೆ ಅವರ ಹೋರಾಟ ವಿಫಲವಾಗಿದ್ದು, ಅವರಿಗೆ ಭಾರಿ ಸಾವು ನೋವು ಉಂಟಾಗಿವೆ ಎಂದಿದ್ದಾರೆ.