ಕೀವ್: ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧ ದಿನದಿಂದ ದಿನಕ್ಕೆ ಉಗ್ರರೂಪ ಪಡೆದುಕೊಳ್ಳುತ್ತಿದೆ. ನಿತ್ಯ ಸಾವಿನ ಸಂಖ್ಯೆಗಳು ಹೆಚ್ಚುತ್ತಲೇ ಇವೆ. ಇದರ ಮಧ್ಯೆ ರಷ್ಯಾ ಸೈನ್ಯದ ಮೇಲೆ ಉಕ್ರೇನ್ ದಾಳಿ ಮಾಡಿ 50ಕ್ಕೂ ಹೆಚ್ಚು ಸೈನಿಕರನ್ನು ಬಲಿ ಪಡೆದುಕೊಂಡಿದೆ.
ಹೌದು, ಉಕ್ರೇನ್ ನಡೆಸಿರುವ ದಾಳಿಯಲ್ಲಿ ರಷ್ಯಾದ 50 ಸೈನಿಕರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ ಭಾರಿ ವಾಹನಗಳು ಧ್ವಂಸಗೊಂಡಿವೆ. ಈ ದಾಳಿಯಲ್ಲಿ 3 ಯುದ್ಧ ಟ್ಯಾಂಕ್‌ಗಳು, ಒಂದು ಮಸ್ತಾ - ಎಸ್ ಯುದ್ಧ ಟ್ಯಾಂಕರ್ ಮತ್ತು 11 ಶಸ್ತ್ರಸಜ್ಜಿತ ವಾಹನಗಳನ್ನು ಉಕ್ರೇನ್ ಪಡೆಗಳು ನಾಶಪಡಿಸಿದ್ದಾವೆ. ಉಕ್ರೇನಿನ ದಕ್ಷಿಣ ಭಾಗದಲ್ಲಿ ಗುರುವಾರ ಈ ದಾಳಿ ನಡೆದಿದೆ ಎಂದು ಉಕ್ರೇನ್‌ನ ದಕ್ಷಿಣ ಆಪರೇಷನಲ್ ಕಮಾಂಡ್ ತಿಳಿಸಿದೆ.
ದಾಳಿಗೆ ಕಪ್ಪು ಸಮುದ್ರದಲ್ಲಿ ರಷ್ಯಾ 17 ಹಡಗುಗಳೊಂದಿಗೆ ಸಿದ್ಧವಾಗಿದೆ. 16 ಕ್ಯಾಲಿಬರ್ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಇರುವ ಎರಡು ಕ್ಷಿಪಣಿ ವಾಹಕಗಳಿವೆ ಎಂದು ಕಮಾಂಡ್ ಬಹಿರಂಗಪಡಿಸಿದೆ. ಉಕ್ರೇನ್‌ನಲ್ಲಿ ಮಾನವೀಯ ಕಾರ್ಯಾಚರಣೆಗಳನ್ನು ನಡೆಸುವ ಪ್ರದೇಶಗಳು, ಕಟ್ಟಡಗಳು ಮತ್ತು ಇತರ ಸೌಲಭ್ಯಗಳನ್ನು ನಾಶಮಾಡಲು ಅವರು ಸಿದ್ಧರಾಗಿದ್ದಾರೆ ಎಂದು ಉಕ್ರೇನಿಯನ್ ಮಾಧ್ಯಮಗಳು ವರದಿಮಾಡಿವೆ.
ರಷ್ಯಾ ವಿರುದ್ಧ ಉಕ್ರೇನಿಯನ್ ಸೈನದೊಂದಿಗೆ ಕೈಜೋಡಿಸಿದ್ದ ಜಪಾನಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಯುದ್ಧದಲ್ಲಿ ನಮ್ಮ ದೇಶದ ಮೊದಲ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಟೋಕಿಯೊದ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ:ಉಕ್ರೇನ್ ವಿರುದ್ಧ ಪರಮಾಣು ಅಸ್ತ್ರ ಪ್ರಯೋಗಿಸುವ ಯಾವುದೇ ಉದ್ದೇಶ ನಮಗಿಲ್ಲ: ಪುಟಿನ್