ಲಂಡನ್ (ಇಂಗ್ಲೆಂಡ್) :ಹಮಾಸ್ ಭಯೋತ್ಪಾದಕರು ಇಸ್ರೇಲ್‌ಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಾರಕವಾಗಿದ್ದಾರೆ. ಹೀಗಾಗಿ ಅವರಿಗೆ ಗಾಜಾ ಅಥವಾ ಪ್ಯಾಲೆಸ್ಟೈನಿಯನ್ ಪ್ರದೇಶದ ಯಾವುದೇ ಭಾಗವನ್ನು ನಿಯಂತ್ರಿಸಲು ಅವಕಾಶ ನೀಡಬಾರದು ಎಂದು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮಂಗಳವಾರ ಹೇಳಿದರು.
ಹಮಾಸ್-ಇಸ್ರೇಲ್ ಯುದ್ಧ ಕುರಿತಂತೆ ಮಾತನಾಡಿರುವ ವಿಡಿಯೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಹಮಾಸ್ ಉಗ್ರರ ಮೇಲೆ ಯುದ್ಧ ಸಾರಿರುವ ಇಸ್ರೇಲ್ ಪಡೆಗಳು, ತಮ್ಮ ದೇಶದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯುದ್ಧ ನಿಲುಗಡೆ ಜತೆಗೆ ಎರಡು ರಾಷ್ಟ್ರಗಳ ಸಾರ್ವಭೌಮತ್ವಕ್ಕಾಗಿ ವಿಶ್ವ ಶಕ್ತಿಗಳು ಪ್ರಯತ್ನಿಸಬೇಕು ಎಂದಿದ್ದಾರೆ.
ಗಾಜಾ ಮತ್ತು ಇರಾನ್ನಲ್ಲಿ ಇರುವ ಬ್ರಿಟನ್ ಪ್ರಜೆಗಳ ಬಗ್ಗೆ ತಮಗೆ ಕಾಳಜಿ ಇದೆ. ಯುದ್ಧ ಸಂಕಷ್ಟದಲ್ಲಿ ಅವರಿಗೆ ಯಾವುದೇ ತೊಂದರೆಯಾಗಬಾರದು. ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಒಟ್ಟಾಗಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
ಎರಡು ರಾಷ್ಟ್ರವೇ ಪರಿಹಾರ:ಇಸ್ರೇಲ್ ಮತ್ತು ಪ್ಯಾಲೆಸ್ಟೈನಿಯನ್ನರು ತಮ್ಮ ದೇಶದ ಅಸ್ತಿತ್ವದ ಹಕ್ಕು ಹೊಂದಿದ್ದಾರೆ. ಹಮಾಸ್ ಉಗ್ರರು ಗಾಜಾ ಪಟ್ಟಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಹಿಡಿತ ಸಾಧಿಸಿದ್ದಾರೆ. ಇದನ್ನು ಹೋಗಲಾಡಿಸಿ, ಇಸ್ರೇಲಿಗರು ಮತ್ತು ಪ್ಯಾಲೆಸ್ಟೈನಿಯನ್ನರಿಗೆ ಪ್ರತ್ಯೇಕ ದೇಶ ರಚನೆಗೆ ಅವಕಾಶ ನೀಡಬೇಕು. ಈ ನೀತಿಯಿಂದ ಮಾತ್ರ ಬಿಕ್ಕಟ್ಟು ಪರಿಹರಿಸಲು ಸಾಧ್ಯ. ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಪ್ಯಾಲೆಸ್ಟೈನಿಯನ್ ಪ್ರದೇಶಗಳಲ್ಲಿ ಪರಿಣಾಮಕಾರಿ ಆಡಳಿತವನ್ನು ಸ್ಥಾಪಿಸಲು ಬ್ರಿಟನ್ ಇತರ ವಿಶ್ವ ಶಕ್ತಿಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.