ಲಂಡನ್:ಆರ್ಥಿಕ ಸಂಕಷ್ಟದ ಕಾಲದಲ್ಲಿ ದೇಶದ ಪ್ರಧಾನಿಯಾಗಿರುವ 'ಭಾರತದ ಅಳಿಯ' ರಿಷಿ ಸುನಕ್ ಸರ್ಕಾರ ಉಪಚುನಾವಣೆಯ ಭೀತಿಯಲ್ಲಿದೆ. ಕಾರಣ ಕನ್ಸರ್ವೇಟಿವ್ ಪಕ್ಷದ ಸಂಸದ, ಮಾಜಿ ಸಚಿವ ಕ್ರಿಸ್ ಸ್ಕಿಡ್ಮೋರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಹುಮತದ ಕೊರತೆ ಎದುರಿಸುವಂತಾಗಿದೆ.
ಮುಂದಿನ ವಾರ ಬ್ರಿಟನ್ ಸಂಸತ್ತಿನಲ್ಲಿ ಹೊಸ ತೈಲ ಮತ್ತು ಅನಿಲ ಉತ್ಪಾದನೆ ಸಂಬಂಧಿತ ಕಾಯ್ದೆಗೆ ಅನುಮೋದನೆ ಪಡೆಯಲು ರಿಷಿ ಸರ್ಕಾರ ಮುಂದಾಗಿದ್ದರೆ, ಇದನ್ನು ವಿರೋಧಿಸಿ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಕ್ರಿಸ್ ಸ್ಕಿಡ್ಮೋರ್ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಿಂಗ್ಸ್‌ವುಡ್‌ನ ಟೋರಿ ಸಂಸದರಾಗಿರುವ ಕ್ರಿಸ್, 'ವೈಯಕ್ತಿಕ ಕಾರಣಗಳಿಗಾಗಿ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಹೊಸ ಸಂಸದರು ಸಂಸತ್ತನ್ನು ಪ್ರತಿನಿಧಿಸಲಿ' ಎಂದು ಹೇಳಿದ್ದಾರೆ. 42 ವರ್ಷದ ಕ್ರಿಸ್ ಅವರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದರು. ಆದರೆ, ದಿಢೀರ್ ನಿರ್ಗಮನದಿಂದಾಗಿ ಸುನಕ್ ಸರ್ಕಾರ ಉಪಚುನಾವಣೆ ಎದುರಿಸುವ ಭೀತಿ ಸೃಷ್ಟಿಸಿದೆ.
ಈ ಮಸೂದೆಯು ಸಮುದ್ರದಲ್ಲಿ ಪಳೆಯುಳಿಕೆಗಳಿಂದ ಹೆಚ್ಚಿನ ತೈಲ ಮತ್ತು ಅನಿಲ ಉತ್ಪಾದನೆಗೆ ಅವಕಾಶ ಮಾಡಿಕೊಡುತ್ತದೆ. ಆದರೆ, ಇದು ಹವಾಮಾನ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಲಿದೆ. ಇದರ ಪರ- ವಿರುದ್ಧ ಮತ ಹಾಕಲು ಸಂಸದರಿಗೆ ಕಷ್ಟವಾಗಲಿದೆ. ಹೀಗಾಗಿ ನಾನು ಈ ಕಾಯ್ದೆಯಿಂದ ಹಿಂದೆ ಸರಿಯುವುದಾಗಿ ಕ್ರಿಸ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಜನವರಿ 8 ರಂದು ರಿಷಿ ಸುನಕ್ ಸರ್ಕಾರ ತೈಲ ಮತ್ತು ಅನಿಲ ಕಂಪನಿಗಳು ಪ್ರತಿ ವರ್ಷ ಪಳೆಯುಳಿಕೆ ಇಂಧನಗಳನ್ನು ಕೊರೆಯಲು ಹೊಸ ಪರವಾನಗಿಗಳನ್ನು ಪಡೆದುಕೊಳ್ಳುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಿದೆ.
ಸಂಪುಟ ಪುನಾರಚನೆ:ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಈಚೆಗೆ ತಮ್ಮ ಸಚಿವ ಸಂಪುಟವನ್ನು ಪುನರ್ ರಚಿಸಿದ್ದರು. ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಲಂಡನ್ನಲ್ಲಿ ನಡೆದ ಪ್ಯಾಲೆಸ್ಟೈನ್ ಪರ ಪ್ರತಿಭಟನೆಗಳ ಬಗ್ಗೆ ಪೊಲೀಸರನ್ನು ಟೀಕಿಸಿ ದಿ ಟೈಮ್ಸ್ ಪತ್ರಿಕೆಯಲ್ಲಿ ವಿವಾದಾತ್ಮಕ ಲೇಖನ ಬರೆದ ಕಾರಣ ಭಾರತೀಯ ಮೂಲದ ಸುಯೆಲ್ಲಾ ಬ್ರೇವರ್ಮನ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಆ ಸ್ಥಾನಕ್ಕೆ ಹೊಸ ಗೃಹ ಕಾರ್ಯದರ್ಶಿಯಾಗಿ ಜೇಮ್ಸ್ ಕ್ಲೆವರ್ಲಿ ಅವರನ್ನು ನೇಮಿಸಲಾಗಿದೆ. ಪಕ್ಷದ ಬಲಪಂಥೀಯರನ್ನು ಪ್ರತಿನಿಧಿಸುತ್ತಿರುವ ಭಾರತೀಯ ಮೂಲದ ಟೋರಿ ಪಕ್ಷದ ನಾಯಕಿ ಬ್ರೇವರ್ಮನ್ ಅವರು ಪೊಲೀಸರ ಕ್ರಮಗಳ ಬಗ್ಗೆ ನೀಡಿದ ಹೇಳಿಕೆಗಳ ವಿವಾದದ ಮಧ್ಯೆ ಸ್ಥಾನ ತೊರೆದಿದ್ದರು.
ಇದನ್ನೂ ಓದಿ:ಬ್ರಿಟನ್ ಸರ್ಕಾರದಿಂದ ಅಕ್ರಮ ವಲಸೆ ವಿರುದ್ಧ ಹೊಸ ಕಾನೂನು: ಏನಿದು ನ್ಯೂ ಲಾ?