ಲಂಡನ್(ಯುಕೆ): ಬ್ರಿಟನ್ ಪ್ರಧಾನಿ ರೇಸ್ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಭಾರತ ಮೂಲದ ರಿಷಿ ಸುನಕ್ ಅಂತಿಮ ಸುತ್ತಿಗೆ ಲಗ್ಗೆ ಹಾಕಿದ್ದಾರೆ. ಇವರ ಎದುರಾಳಿಯಾಗಿ ಲಿಜ್ ಟ್ರಸ್ ಇದ್ದಾರೆ. ಇಬ್ಬರಲ್ಲೂ ಪ್ರಧಾನಿ ಹುದ್ದೆ ಯಾರು ಅಲಂಕಾರ ಮಾಡಲಿದ್ದಾರೆಂಬ ತೀವ್ರ ಕುತೂಹಲ ಮೂಡಿದೆ. ಇನ್ಪೋಸಿಸ್ ಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಕ್ ಪ್ರಧಾನಿ ಆಗಿ ಆಯ್ಕೆಯಾದರೆ, ಹೊಸದೊಂದು ಇತಿಹಾಸ ನಿರ್ಮಾಣಗೊಳ್ಳಲಿದೆ.
5ನೇ ಸುತ್ತಿನ ಮತದಾನದಲ್ಲಿ ಸುನಕ್ 137 ಮತ ಪಡೆದುಕೊಂಡಿದ್ದು, ಲಿಜ್ ಟ್ರಸ್ 113 ಮತ ಪಡೆದುಕೊಂಡಿದ್ದಾರೆ. ಹೀಗಾಗಿ, ಸ್ಪರ್ಧೆಯಲ್ಲಿ ರಿಷಿ ಸುನಕ್ ಹಾಗೂ ಲಿಜ್ ಟ್ರಸ್ ಮಾತ್ರ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದು, ಪೆನ್ನಿ ಮೊರ್ಡಾಂಟ್ ಹೊರಬಿದ್ದಿದ್ದಾರೆ. ಅಂತಿಮ ಸುತ್ತಿನಲ್ಲಿ ವಿಜಯಲಕ್ಷ್ಮಿ ಯಾರ ಪಾಲಾಗಲಿದ್ದಾರೆಂಬ ಕುತೂಹಲ ಮೂಡಿದೆ. ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ರಿಷಿ ಸುನಕ್ ಲಂಡನ್ನ ಮುಂದಿನ ಪ್ರಧಾನಿ ಎಂದು ಬಿಂಬಿತವಾಗಿದ್ದು, ಕನ್ಸರ್ವೆಟಿವ್ ಪಕ್ಷದ ನಾಯಕನಾಗಿ ಹೊರಹೊಮ್ಮುವ ಎಲ್ಲ ಲಕ್ಷಣ ಗೋಚರವಾಗ್ತಿವೆ.