ಲಂಡನ್ : ಅಕ್ರಮವಾಗಿ ತನ್ನ ದೇಶಕ್ಕೆ ಪ್ರವೇಶಿಸುವ ಭಾರತೀಯರಿಗೆ ಇನ್ನು ಮುಂದೆ ಪೌರತ್ವ ನೀಡುವುದಿಲ್ಲ ಎಂದು ಯುನೈಟೆಡ್ ಕಿಂಗ್ಡಮ್ ಘೋಷಿಸಿದೆ. ದೇಶದ ಅಕ್ರಮ ವಲಸೆ ಕಾಯ್ದೆಯಲ್ಲಿ ಪ್ರಮುಖ ಬದಲಾವಣೆ ಮಾಡುವ ನಿಟ್ಟಿನಲ್ಲಿ ಭಾರತ ಮತ್ತು ಜಾರ್ಜಿಯಾಗಳನ್ನು ಸುರಕ್ಷಿತ ದೇಶಗಳ ಪಟ್ಟಿಗೆ ಸೇರಿಸಲು ಬ್ರಿಟನ್ ಸರ್ಕಾರ ಯೋಜಿಸಿದೆ.
ಭಾರತವನ್ನು ಸುರಕ್ಷಿತ ದೇಶವೆಂದು ಪರಿಗಣಿಸುವುದು ಎಂದರೆ ಯಾವುದೇ ಒಬ್ಬ ವ್ಯಕ್ತಿಯು ಅಕ್ರಮವಾಗಿ ದೇಶದೊಳಗೆ ಬಂದರೆ, ಬ್ರಿಟನ್ ದೇಶದ ಆಶ್ರಯ ವ್ಯವಸ್ಥೆಯಡಿ ಆ ವ್ಯಕ್ತಿಯ ಹಕ್ಕನ್ನು ಮಾನ್ಯ ಮಾಡಲಾಗುವುದಿಲ್ಲ ಎಂದರ್ಥ ಎಂದು ಗೃಹ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಬುಧವಾರ ಸಂಸತ್ತಿನಲ್ಲಿ ಮಂಡಿಸಲಾದ ಕರಡು ಶಾಸನದ ಪ್ರಕಾರ, ಈ ಕ್ರಮವು ಬ್ರಿಟನ್ನ ವಲಸೆ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಆಧಾರ ರಹಿತವಾಗಿ ಸುರಕ್ಷತೆ ಬೇಡುವುದನ್ನು ಹಾಗೂ ಕಾಯ್ದೆಯ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ತಮ್ಮ ದೇಶಗಳಲ್ಲಿ ತಮ್ಮ ಜೀವಕ್ಕೆ ಯಾವುದೇ ಅಪಾಯವಿಲ್ಲದಿದ್ದರೂ ಹಲವಾರು ಭಾರತೀಯ ಮತ್ತು ಜಾರ್ಜಿಯಾ ನಾಗರಿಕರು ಸಣ್ಣ ದೋಣಿಗಳ ಮೂಲಕ ದೇಶದೊಳಗೆ ಪ್ರವೇಶಿಸುತ್ತಿರುವುದು ಹೆಚ್ಚಾಗುತ್ತಿದೆ ಎಂದು ಅಲ್ಲಿನ ಗೃಹ ಕಚೇರಿ ತಿಳಿಸಿದೆ. "ಮುಖ್ಯವಾಗಿ ತಾವು ಸುರಕ್ಷಿತವಾಗಿರುವ ದೇಶಗಳಿಂದ ಜನರು ಅಪಾಯಕಾರಿಯಾಗಿ ಹಾಗೂ ಕಾನೂನುಬಾಹಿರವಾಗಿ ಯುಕೆಗೆ ಪ್ರಯಾಣ ಮಾಡುವುದನ್ನು ನಿಲ್ಲಿಸುವುದು ನಮ್ಮ ಆದ್ಯತೆ" ಎಂದು ಬ್ರಿಟಿಷ್ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೇವರ್ಮನ್ ಹೇಳಿದರು.