ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಯುನೈಟೆಡ್ ಕಿಂಗ್‌ಡಂ ಸರ್ಕಾರ ಒಪ್ಪಿಗೆ ನೀಡಿದೆ. ಗುಪ್ತ ಮಿಲಿಟರಿ ದಾಖಲೆಗಳು ಹಾಗೂ ರಾಜತಾಂತ್ರಿಕ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪಿಯಾಗಿರುವ ಅಸಾಂಜ್ ಅಮೆರಿಕಕ್ಕೆ ಬೇಕಾಗಿದ್ದಾರೆ.
ಯುನೈಟೆಡ್ ಕಿಂಗ್‌ಡಂ ಗೃಹ ಇಲಾಖೆ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಶುಕ್ರವಾರ ಅಸಾಂಜ್ ಹಸ್ತಾಂತರಕ್ಕೆ ಅನುಮತಿ ನೀಡಿದ್ದಾರೆ. ಅಮೆರಿಕಕ್ಕೆ ತಮ್ಮನ್ನು ಹಸ್ತಾಂತರಗೊಳಿಸುವುದರ ವಿರುದ್ಧ ಅಸಾಂಜ್ ಹಲವಾರು ಹಂತಗಳಲ್ಲಿ ನ್ಯಾಯಾಂಗ ಹೋರಾಟ ಮಾಡಿದರೂ ಸಫಲರಾಗಲಿಲ್ಲ. ಇಷ್ಟಾದರೂ ಅಸಾಂಜ್ ಮುಂದೆ ಮೇಲ್ಮನವಿಯ ಇನ್ನೂ ಕೆಲ ಆಯ್ಕೆಗಳು ಬಾಕಿ ಇವೆ. ಬರುವ 14 ದಿನಗಳ ಒಳಗೆ ಅವರು ಮತ್ತೊಮ್ಮೆ ಹಸ್ತಾಂತರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು.