ಕರ್ನಾಟಕ

karnataka

ETV Bharat / international

ಇಸ್ರೇಲ್​ ಮತ್ತು ಪ್ಯಾಲೆಸ್ಟೆನ್​ ಹಮಾಸ್​​ ಸಂಘರ್ಷ: ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್​

ಇಸ್ರೇಲ್​ ಮತ್ತು ಪ್ಯಾಲೆಸ್ಟೆನ್​ ಹಮಾಸ್ ಉಗ್ರರ ನಡುವೆ ಸಂಘರ್ಷ ನಡೆಯುತ್ತಿದ್ದು, ಹಮಾಸ್​ ಉಗ್ರರು ಒತ್ತೆಯಾಳಾಗಿರಿಸಿದ್ದ ಇಬ್ಬರ ಇಸ್ರೇಲಿಗರನ್ನು ಬಿಡುಗಡೆ ಮಾಡಿದೆ.

two-women-held-hostage-in-gaza-released-by-hamas
ಇಸ್ರೇಲ್​ ಮತ್ತು ಪ್ಯಾಲೆಸ್ಟೆನ್​ ಹಮಾಸ್​​ ಸಂಘರ್ಷ : ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್​

By PTI

Published : Oct 24, 2023, 9:57 AM IST

ರಫಾಹ್​ (ಗಾಜಾಪಟ್ಟಿ): ಇಸ್ರೇಲ್​ ಮತ್ತು ಪ್ಯಾಲೆಸ್ಟೆನ್​ ಹಮಾಸ್​​ ಉಗ್ರರ ನಡುವಿನ ಸಂಘರ್ಷ ಮುಂದುವರೆದಿದೆ. ಈ ನಡುವೆ ಹಮಾಸ್​ ಉಗ್ರರು ಗಾಜಾದಲ್ಲಿ ಒತ್ತೆಯಾಳಾಗಿರಿಸಿದ್ದ ಇಸ್ರೇಲ್​ನ ಇಬ್ಬರು ವೃದ್ಧೆಯರನ್ನು ಬಿಡುಗಡೆ ಮಾಡಿದೆ ಎಂದು ರೆಡ್​ ಕ್ರಾಸ್​ ಅಂತಾರಾಷ್ಟ್ರೀಯ ಸಮಿತಿ ಹೇಳಿದೆ.

ಕಳೆದ ಅಕ್ಟೋಬರ್​ 7ರಿಂದ ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವೆ ಸಂಘರ್ಷ ನಡೆಯುತ್ತಿದ್ದು, ಹಮಾಸ್ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್​ ವೈಮಾನಿಕ ದಾಳಿ ನಡೆಸುತ್ತಿದೆ. ಇದೇ ವೇಳೆ, ಹಮಾಸ್​ ಹಲವರನ್ನು ಒತ್ತೆಯಾಳಾಗಿರಿಸಿದ್ದು, ಇದೀಗ ಎರಡನೇ ಬಾರಿಗೆ ತನ್ನ ಒತ್ತೆಯಾಳುಗಳನ್ನು ಹಮಾಸ್​​ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಒತ್ತೆಯಾಳುಗಳನ್ನು ನಿರ್​ ಒಝ್​​ ಕಿಬ್ಬುಟ್ಜ್​​ನ ಯೋಚೆವ್ಡ್ ಲಿಫ್‌ಶಿಟ್ಜ್ (85) ಮತ್ತು ನೂರಿತ್​ ಕೂಪರ್​(79) ಎಂದು ಗುರುತಿಸಲಾಗಿದೆ.

ಈ ವೃದ್ಧೆಯರನ್ನು ಅವರ ಗಂಡಂದಿರ ಸಮೇತ ಗಾಜಾ ಗಡಿ ಭಾಗದಲ್ಲಿರುವ ನಿರ್​ ಒಝ್​ ಕಿಬ್ಬುಟ್ಜ್​​ನಿಂದ ಸೆರೆ ಹಿಡಿಯಲಾಗಿತ್ತು. ಬಳಿಕ ಅವರನ್ನು ಗಾಜಾದಲ್ಲಿ ಒತ್ತೆಯಾಳಾಗಿ ಇರಿಸಲಾಗಿತ್ತು. ಇದೀಗ ಇಬ್ಬರು ವೃದ್ಧೆಯರನ್ನು ಉಗ್ರರು ಬಿಡುಗಡೆ ಮಾಡಿದ್ದು, ಅವರ ಗಂಡಂದಿರನ್ನು ಹಮಾಸ್​ ಇನ್ನೂ ಒತ್ತೆಯಾಳಾಗಿ ಇರಿಸಿಕೊಂಡಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಹಮಾಸ್​, ಮಾನವೀಯ ಕಾರಣಗಳಿಂದಾಗಿ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ. ಹಮಾಸ್​ ಬಂಧನದಲ್ಲಿರುವ ಎಲ್ಲ ನಾಗರಿಕರನ್ನು ಬಿಡುಗಡೆ ಮಾಡಬೇಕು ಎಂದು ಇಸ್ರೇಲ್​ ಇದೇ ವೇಳೆ ಒತ್ತಾಯಿಸಿದೆ. ಸುಮಾರು 200ಕ್ಕೂ ಅಧಿಕ ಜನರನ್ನು ಹಮಾಸ್​ ಒತ್ತೆಯಾಳುಗಳನ್ನಾಗಿರಿಸಿಕೊಂಡಿದೆ. ಇದರಲ್ಲಿ ವಿದೇಶಿಗರೂ ಸೇರಿದ್ದಾರೆ ಎಂದು ಹೇಳಲಾಗಿದೆ. ಕಳೆದ ಶುಕ್ರವಾರ ಹಮಾಸ್​​ ಉಗ್ರರು ಅಮೆರಿಕದ ತಾಯಿ ಮತ್ತು ಮಗಳನ್ನು ಬಿಡುಗಡೆ ಮಾಡಿದ್ದರು.

ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವಿನ ಸಂಘರ್ಷ ಗಾಜಾದಲ್ಲಿ ವ್ಯಾಪಕ ಹಾನಿ ಉಂಟಾಗಿರುವುದಕ್ಕೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್​​ ವೈಮಾನಿಕ ದಾಳಿಗಳನ್ನು ಹೆಚ್ಚಿಸಿರುವುದರಿಂದ ಗಾಜಾಪಟ್ಟಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ನಡುವೆ ಹಮಾಸ್​ ಉಗ್ರರು ಒತ್ತೆಯಾಳಾಗಿರಿಸಿರುವ ನಾಗರೀಕರನ್ನು ಬಿಡುಗಡೆಗೆ ಮಾತುಕತೆ ನಡೆಸಲು ಮತ್ತು ತನ್ನ ದಾಳಿಯನ್ನು ವಿಳಂಬ ಮಾಡಲು ಇಸ್ರೇಲ್​ಗೆ​ ಅಮೆರಿಕ ಸಲಹೆ ನೀಡಿದೆ. ಗಾಜಾದಲ್ಲಿ ಇಸ್ರೇಲ್​ ದಿಗ್ಭಂಧನ ವಿಧಿಸಿರುವುದರಿಂದ ಸುಮಾರು 2 ಮಿಲಿಯನ್​​ಗೂ ಅಧಿಕ ಜನರು ನೀರು, ಆಹಾರ, ಔಷಧ ಕೊರತೆಯಿಂದ ನಲುಗಿದ್ದಾರೆ. ಈ ಸಂಬಂಧ ಭಾರತದಿಂದ ಈಜಿಪ್ಟ್​ ಮೂಲಕ ಆಹಾರ, ಔಷಧ ಮತ್ತು ವಿವಿಧ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗಿದೆ.

ಇಸ್ರೇಲ್​ ಮತ್ತು ಹಮಾಸ್​ ಸಂಘರ್ಷದಲ್ಲಿ , ಇಸ್ರೇಲ್​ನಲ್ಲಿ ಹಮಾಸ್​ ದಾಳಿಗೆ ಸುಮಾರು 1400ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಸುಮಾರು 222 ಜನರನ್ನು ಸೆರೆ ಹಿಡಿದು ಗಾಜಾಕ್ಕೆ ಎಳೆದೊಯ್ಯಲಾಗಿದೆ ಎಂದು ಇಸ್ರೇಲ್​ ಸೇನಾಪಡೆ ತಿಳಿಸಿದೆ. ಇಸ್ರೇಲ್​ ದಾಳಿಗೆ, ಸುಮಾರು 2000 ಅಪ್ರಾಪ್ತರು, 1100 ಮಹಿಳೆಯರು ಸೇರಿ 5000ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಹಮಾಸ್​ ಹೇಳಿದೆ. ಕಳೆದ 24 ಗಂಟೆಯಲ್ಲಿ 436 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ :ಇಸ್ರೇಲ್-ಪ್ಯಾಲೆಸ್ಟೈನ್‌ ಯುದ್ಧ: ಗಾಜಾದಲ್ಲಿ ಇಂಧನ, ವಿದ್ಯುತ್​ ಕೊರತೆ; 30 ಆಸ್ಪತ್ರೆಗಳಲ್ಲಿ ರೋಗಿ, ಶಿಶುಗಳ ಸಾವಿನ ಆತಂಕ

ABOUT THE AUTHOR

...view details