ವಾರ್ಸಾ(ಪೋಲೆಂಡ್): ರಷ್ಯಾ-ಉಕ್ರೇನ್ ಯುದ್ಧ ದಿನೇ ದಿನೇ ತೀವ್ರ ಸ್ವರೂಪವನ್ನೇ ಪಡೆದುಕೊಳ್ಳುತ್ತಿದೆ. ಇದೀಗ ಸಂಘರ್ಷದ ವ್ಯಾಪ್ತಿ ಹತ್ತಿರದ ದೇಶಗಳಿಗೂ ಹರಡುವ ಸೂಚನೆ ಸಿಕ್ಕಿದೆ. ರಷ್ಯಾ ನಿರ್ಮಿತ ಎರಡು ಕ್ಷಿಪಣಿಗಳು ಪೋಲೆಂಡ್ ಭೂಪ್ರದೇಶಕ್ಕೆ ಮಂಗಳವಾರ ಬಂದಪ್ಪಳಿಸಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಕ್ಷಿಪಣಿ ಬಿದ್ದಿರುವ ಕುರಿತು ವರದಿಯಾಗುತ್ತಿದ್ದಂತೆ ಪೋಲೆಂಡ್‌ನ ಪ್ರಧಾನಮಂತ್ರಿ ಮಾಟೆಸ್ಜ್ ಮೊರಾವಿಕಿ ಅವರು ತುರ್ತು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ವ್ಯವಹಾರಗಳ ಮಂತ್ರಿಗಳ ಮಂಡಳಿಯ ಸಮಿತಿ ಸಭೆ ಕರೆದಿದ್ದಾರೆ ಎಂದು ಸರ್ಕಾರದ ವಕ್ತಾರ ಪಿಯೋಟರ್ ಮುಲ್ಲರ್ ಟ್ವೀಟ್ ಮಾಡಿದ್ದಾರೆ.
ಪೋಲಿಷ್ ಭೂಪ್ರದೇಶದಲ್ಲಿ ಬಂದು ಬಿದ್ದಿರುವ ಎರಡು ಕ್ಷಿಪಣಿಗಳು ರಷ್ಯಾದಿಂದ ಬಂದವು ಎಂದು ಪಾಶ್ಚಿಮಾತ್ಯ ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ಉಕ್ರೇನ್‌ನ ಗಡಿಯಲ್ಲಿರುವ ಲುಬ್ಲಿನ್ ವೊವೊಡೆಶಿಪ್‌ನಲ್ಲಿರುವ ಪ್ರಜೆವೊಡೋವ್‌ನ ಜನನಿಬಿಡ ಪ್ರದೇಶಕ್ಕೂ ಎರಡು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಉಕ್ರೇನ್‌ನ ಕೀವ್ನಲ್ಲಿ ರಷ್ಯಾದಿಂದ ಸರಣಿ ಕ್ಷಿಪಣಿ ದಾಳಿ..ಸ್ಪೋಟದಿಂದ ಎಂಟು ಮಂದಿ ಸಾವು
ಪೋಲೆಂಡ್ ನ್ಯಾಟೋ (NATO) ಮಿಲಿಟರಿ ಮೈತ್ರಿಗೆ ಸಹಿ ಹಾಕಿದೆ. ಒಪ್ಪಂದದ 5 ನೇ ವಿಧಿಯ ಪ್ರಕಾರ, ಒಂದು ಸದಸ್ಯ ರಾಷ್ಟ್ರಗಳ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನು ಎಲ್ಲಾ ಸದಸ್ಯ ರಾಷ್ಟ್ರಗಳ ವಿರುದ್ಧದ ದಾಳಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಈ ಘಟನೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಗೋಚರಿಸಿದೆ.