ವಿಶ್ವಸಂಸ್ಥೆ/ನವದೆಹಲಿ:ಮಧ್ಯ ಆಫ್ರಿಕಾದ ಕಾಂಗೋದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕತೆಗೆ ತಿರುಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿದ್ದ ಇಬ್ಬರು ಭಾರತೀಯ ಯೋಧರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. 50 ಜನರು ಗಾಯಗೊಂಡಿದ್ದಾರೆ. ಪ್ರಜಾಸತ್ತಾತ್ಮಕ ಗಣರಾಜ್ಯವಾದ ಕಾಂಗೋದಲ್ಲಿ ಸಶಸ್ತ್ರ ಬಂಡುಕೋರ ಗುಂಪುಗಳ ದಾಳಿ ಹೆಚ್ಚುತ್ತಿದೆ. ಇದನ್ನು ತಡೆಯಲು ಅಲ್ಲಿನ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದೊಡ್ಡ ಪ್ರತಿಭಟನೆಗಳು ನಡೆಯುತ್ತಿದೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್, ಇಬ್ಬರು ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ಖಚಿತಪಡಿಸಿದ್ದಾರೆ. ಅತಿರೇಕದ ದಾಳಿಯಲ್ಲಿ ವೀರ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮೃತ ಬಿಎಸ್ಎಫ್ ಯೋಧರು ಹೆಡ್ ಕಾನ್‌ಸ್ಟೇಬಲ್ ಶ್ರೇಣಿಯಲ್ಲಿದ್ದರು. ರಾಜಸ್ಥಾನ ಮೂಲದವರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.