ಕಾಬೂಲ್, ಅಫ್ಘಾನಿಸ್ತಾನ: ಶುಕ್ರವಾರದ ಪ್ರಾರ್ಥನೆಯ ವೇಳೆ ವಾಯವ್ಯ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ.
ಹೆರಾತ್ ನಗರದ ಗುಜರ್ಗಾ ಮಸೀದಿಯಲ್ಲಿ ಮಧ್ಯಾಹ್ನ 12:40ರ ಸುಮಾರಿಗೆ ಬಾಂಬ್ ದಾಳಿ ನಡೆದಿದೆ ಎಂದು ಖಮಾ ಪ್ರೆಸ್ ವರದಿ ಮಾಡಿದೆ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಘಟನೆಯನ್ನು ಖಂಡಿಸಿದ್ದು, ಧರ್ಮ ಶತ್ರುಗಳು ನಡೆಸಿದ ಹೇಡಿತನದ ದಾಳಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಈ ಭೀಕರ ಬಾಂಬ್ ಸ್ಫೋಟಕ್ಕೆ ಕಾರಣರಾದವರನ್ನು ತಾಲಿಬಾನ್ ಸರ್ಕಾರ ಉಗ್ರವಾಗಿ ಶಿಕ್ಷೆ ಕೊಡಲಿದೆ ಎಂದು ತಾಲಿಬಾನ್ ವಕ್ತಾರ ಮುಜಾಹಿದ್ ಘೋಷಣೆ ಮಾಡಿದ್ದಾರೆ. ಅವರು ಯಾವುದೇ ಉಗ್ರಗಾಮಿ ಸಂಘಟನೆ ಹೆಸರು ಹೇಳಲಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಭಯೋತ್ಪಾದಕ ಗುಂಪಿನ ವಿರುದ್ಧ ತಾಲಿಬಾನ್ ಹೋರಾಡುತ್ತಿದೆ. ಈ ಬಗ್ಗೆಯೇ ಅವರು ಮಾತನಾಡಿದ್ದಾರೆ ಎನ್ನಲಾಗಿದೆ.