ಕರ್ನಾಟಕ

karnataka

ETV Bharat / international

ಟರ್ಕಿ ಪಡೆಗಳ ಕಾರ್ಯಾಚರಣೆ: ಐಎಸ್ ಉಗ್ರ ಸಂಘಟನೆ ನಾಯಕನ ಹತ್ಯೆ - ಟರ್ಕಿ ಅಧ್ಯಕ್ಷ ರಿಸೆಪ್​ ತಯ್ಯಿಪ್​ ಎರ್ಡೊಗನ್

ಟರ್ಕಿ ಪಡೆಗಳು ನಡೆಸಿದ ದಾಳಿಯಲ್ಲಿ ಐಎಸ್​ ಉಗ್ರ ಸಂಘಟನೆಯ ನಾಯಕ ಬಲಿಯಾಗಿದ್ದಾನೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್​ ತಯ್ಯಿಪ್​ ಎರ್ಡೊಗನ್ ಘೋಷಿಸಿದ್ದಾರೆ.

ಐಎಸ್ ಉಗ್ರ ಸಂಘಟನೆ ನಾಯಕನ ಹತ್ಯೆ
ಐಎಸ್ ಉಗ್ರ ಸಂಘಟನೆ ನಾಯಕನ ಹತ್ಯೆ

By

Published : May 1, 2023, 7:58 PM IST

ಅಂಕಾರಾ:ಟರ್ಕಿ ಮತ್ತು ಸಿರಿಯಾ ಮಧ್ಯೆ ಸಂಗ್ರಾಮ ನಡೆಯುತ್ತಲೇ ಇದೆ. ಈ ಕಾದಾಟದಲ್ಲಿ ನಮ್ಮ ಪಡೆಗಳು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್​​(ಐಎಸ್​) ಸಂಘಟನೆಯ ನಾಯಕನನ್ನು ಹೊಡೆದುರುಳಿಸಿವೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್​ ತಯ್ಯಿಪ್​ ಎರ್ಡೊಗನ್​ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ತಿಳಿಸಿದ ಎರ್ಡೊಗನ್​, ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಐಎಸ್​ ಸಂಘಟನೆಯ ಶಂಕಿತ ನಾಯಕ ಅಬು ಹುಸೇನ್ ಅಲ್ ಖುರೇಶಿ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಗುಪ್ತಚರ ಪಡೆಗಳು ಆತನ ಮೇಲೆ ದೀರ್ಘಕಾಲದಿಂದ ನಿಗಾ ವಹಿಸಿದ್ದವು. ಭಯೋತ್ಪಾದಕ ಸಂಘಟನೆಯ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಎರ್ಡೊಗನ್ ಇದೇ ವೇಳೆ ಹೇಳಿದರು.

ಟರ್ಕಿ ಅಧ್ಯಕ್ಷರ ಈ ಹೇಳಿಕೆಗೆ ಉಗ್ರ ಸಂಘಟನೆಯಾದ ಐಎಸ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟರ್ಕಿಯು ಸಿರಿಯನ್ ಗಡಿಯಲ್ಲಿ ಐಎಸ್ ಮತ್ತು ಕುರ್ದಿಶ್ ಗುಂಪುಗಳ ವಿರುದ್ಧ ಹಲವಾರು ಕಾರ್ಯಾಚರಣೆಗಳನ್ನು ನಡೆಸುತ್ತಲೇ ಇದೆ. ಶಂಕಿತ ಉಗ್ರರ ಸೆರೆ ಅಥವಾ ಹತ್ಯೆ ಸರಣಿ ಮುಂದುವರಿದಿದೆ. ಐಎಸ್​ ಹಿಂದಿನ ಮುಖ್ಯಸ್ಥ ಅಕ್ಟೋಬರ್‌ನಲ್ಲಿ ಕೊಲ್ಲಲ್ಪಟ್ಟ ನಂತರ, ಅಬು ಹುಸೇನ್ ಅಲ್ ಖುರೇಶಿ ಉಗ್ರಗಾಮಿ ಗುಂಪಿನ ನಾಯಕ ಎಂದು ಗುರುತಿಸಿಕೊಂಡಿದ್ದ. ಬಳಿಕ ಐಎಸ್ ವಕ್ತಾರರು ಈತನನ್ನು ಇಸ್ಲಾಮಿಕ್ ಸ್ಟೇಟ್‌ನ ನಿಷ್ಠಾವಂತ ಪುತ್ರರಲ್ಲಿ ಒಬ್ಬ ಎಂದು ಬಣ್ಣಿಸುತ್ತಿದ್ದರು.

ಐಎಸ್​ ಉಗ್ರ ಪಡೆಗಳು ಇರಾಕ್ ಮತ್ತು ಸಿರಿಯಾದ ಪ್ರದೇಶಗಳ ಮೇಲೆ ಹೊಂದಿದ್ದ ಹಿಡಿತ ಕೈಬಿಟ್ಟು ಹೋದ ನಂತರ ಮತ್ತೆ ಅವುಗಳ ಮೇಲೆ ಪ್ರಾಬಲ್ಯ ಸಾಧಿಸಲು ಈತ ಪ್ರಯತ್ನಿಸುತ್ತಿದ್ದ. ಆದರೆ, ಉಭಯ ರಾಷ್ಟ್ರಗಳ ಸ್ಲೀಪರ್ ಸೆಲ್‌ಗಳು ಉಗ್ರರ ಮೇಲೆ ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದ್ದು, ಈಗ ಅದರ ನಾಯಕ ಪ್ರಾಣ ತೆತ್ತಿದ್ದಾರೆ ಎಂದು ತಿಳಿದುಬಂದಿದೆ.

ನಾಯಕರ ಹತ್ಯಾ ಸರಣಿ:ಇದಕ್ಕೂ ಮೊದಲು ಐಎಸ್​ ಉಗ್ರ ಸಂಘಟನೆಯ ಹಲವಾರು ನಾಯಕರನ್ನು ಹತ್ಯೆ ಮಾಡಲಾಗಿದೆ. ಇಸ್ಲಾಮಿಕ್ ಸ್ಟೇಟ್ ಸಂಸ್ಥಾಪಕ ಅಬು ಬಕರ್ ಅಲ್ ಬಾಗ್ದಾದಿಯನ್ನು ಅಮೆರಿಕ ಪಡೆಗಳು ವಾಯುವ್ಯ ಸಿರಿಯಾದಲ್ಲಿ 2019 ರಲ್ಲಿ ನಡೆಸಿದ ದಾಳಿಯಲ್ಲಿ ಬೇಟೆಯಾಡಿದ್ದವು. ಆತನ ಉತ್ತರಾಧಿಕಾರಿಯಾಗಿ ಬಂದಿದ್ದ ಅಬು ಇಬ್ರಾಹಿಂ ಅಲ್ ಹಶಿಮಿ ಅಲ್ ಖುರೈಶಿಯನ್ನು 2022 ರಲ್ಲಿ ಇದೇ ರೀತಿಯ ದಾಳಿಯಲ್ಲಿ ಹತ್ಯೆಯಾಗಿದ್ದ.

ಅಲ್​ ಖೈದಾದ ಭಾಗವಾಗಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ದಶಕದ ಹಿಂದೆ ಅದರಿಂದ ಪ್ರತ್ಯೇಕವಾಗಿ ಉತ್ತರ ಮತ್ತು ಪೂರ್ವ ಸಿರಿಯಾದ ಪ್ರದೇಶಗಳು, ಉತ್ತರ ಮತ್ತು ಪಶ್ಚಿಮ ಇರಾಕ್ ಮೇಲೆ ನಿಯಂತ್ರಣ ಸಾಧಿಸಿತ್ತು.

ತಾಲಿಬಾನ್​ನಲ್ಲಿ ಐಎಸ್​ ಉಗ್ರರ ಹತ್ಯೆ:ಇನ್ನು, ಈಚೆಗಷ್ಟೇ ತಾಲಿಬಾನ್​ನಲ್ಲಿ ಐಎಸ್​ ಸಂಘಟನೆಯ ಇಬ್ಬರು ಉಗ್ರರನ್ನು ಅಲ್ಲಿನ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಇಸ್ಲಾಮಿಕ್​ ಸ್ಟೇಟ್ಸ್​(ಐಎಸ್​) ಸಂಘಟನೆಯು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮುಂದುವರಿಸಿದ್ದು, ಅದರ ವಿರುದ್ಧ ತಾಲಿಬಾನ್​ ಕಾರ್ಯಾಚರಣೆ ನಡೆಸುತ್ತಿದೆ.

ಇದೇ ವೇಳೆ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ತಾಲಿಬಾನ್​ ಸರ್ಕಾರ ತಿಳಿಸಿತ್ತು. ರಾಜಧಾನಿ ಕಾಬೂಲ್‌ನಲ್ಲಿ ಉಗ್ರ ಕೃತ್ಯಕ್ಕೆ ಮುಂದಾಗಿದ್ದ ಐಎಸ್​ ಸಂಘಟನೆಯ ಉಗ್ರರನ್ನು ತಾಲಿಬಾನ್ ಭದ್ರತಾ ಪಡೆಗಳು ಹೊಡೆದುರುಳಿಸಿ, ಶಸ್ತ್ರಾಸ್ತ್ರ, ಬಂದೂಕುಗಳನ್ನು ವಶಕ್ಕೆ ಪಡೆದಿದ್ದವು.

ಓದಿ:10 ಇರಾಕ್​ ಸೇನಾ ಸಿಬ್ಬಂದಿಯನ್ನು ಕೊಂದ ಐಎಸ್ ಉಗ್ರರು!

ABOUT THE AUTHOR

...view details