ನವದೆಹಲಿ:''ಭಾರತದಂತಹ ದೇಶ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಖಾಯಂ ಸದಸ್ಯತ್ವ ಪಡೆದರೆ ಟರ್ಕಿ ಹೆಮ್ಮೆ ಪಡುತ್ತದೆ'' ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಭಾನುವಾರ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯರು ರೊಟೇಷನ್ (ಸರದಿ) ಮೂಲಕ ಭದ್ರತಾ ಮಂಡಳಿಯ ಸದಸ್ಯರಾಗಲು ಅವಕಾಶ ಹೊಂದಿರಬೇಕು ಎಂದು ಮಾಧ್ಯಮಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 5 ಖಾಯಂ ಸದಸ್ಯರಾದ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ದೇಶಗಳನ್ನು ಉಲ್ಲೇಖಿಸಿದ ಎರ್ಡೊಗನ್, "ಭಾರತದಂತಹ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾದರೆ ನಾವು ಹೆಮ್ಮೆಪಡುತ್ತೇವೆ. ಭದ್ರತಾ ಮಂಡಳಿಯಲ್ಲಿ ಐದು ದೇಶಗಳು ಮಾತ್ರ ಇರುವುದನ್ನು ನಾವು ಬಯಸುವುದಿಲ್ಲ" ಎಂದು ಅಭಿಪ್ರಾಯಪಟ್ಟರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳಾಗಿ ಅಲ್ಜೀರಿಯಾ, ಗಯಾನಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ದಕ್ಷಿಣ ಕೊರಿಯಾ ದೇಶವನ್ನು ಆಯ್ಕೆ ಮಾಡಲಾಗಿತ್ತು. ಇದೇ ವರ್ಷದ ಜೂನ್ 6ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಆಯ್ಕೆ ನಡೆದಿತ್ತು. ಹೊಸದಾಗಿ ಭದ್ರತಾ ಮಂಡಳಿಗೆ ಸೇರ್ಪಡೆಯಾಗಿರುವ ರಾಷ್ಟ್ರಗಳು ಜನವರಿ 1, 2024ರಿಂದ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುತ್ತವೆ. ಪ್ರತಿ ವರ್ಷ ಭದ್ರತಾ ಮಂಡಳಿಗೆ ಐದು ಹೊಸ ಸದಸ್ಯ ರಾಷ್ಟ್ರಗಳ ಆಯ್ಕೆ ನಡೆಯುತ್ತದೆ.