ಇಸ್ತಾಂಬುಲ್ (ಟರ್ಕಿ):ಭೂಕಂಪನದ ಮಹಾ ದುರಂತಕ್ಕೆ ಟರ್ಕಿ ಮತ್ತು ಸಿರಿಯಾ ದೇಶಗಳು ಅಕ್ಷರಶಃ ನಲುಗಿ ಹೋಗಿವೆ. ಭೀಕರ ಭೂಕಂಪನದಿಂದ ಕಟ್ಟಡಗಳು ನೆಲಸಮವಾಗಿದ್ದು, ಜನರ ಆಕ್ರಂದನ, ಸಹಾಯದ ಯಾಚನೆಗಳು ಮಣ್ಣಿನಲ್ಲಿ ಲೀನವಾಗುತ್ತಿವೆ. ಒಂದರ ಮೇಲೊಂದರಂತೆ ಅಪ್ಪಳಿಸಿದ ಸರಣಿ ಭೂಕಂಪನ ಜನಜೀವನವನ್ನು ಛಿದ್ರಗೊಳಿಸಿವೆ. ಇತ್ತ ತಮ್ಮ ಮನೆಗಳನ್ನು ಕಳೆದುಕೊಂಡ ಜನರು ಆಹಾರ ಮತ್ತು ನೀರಿಗಾಗಿ ಹಪಹಪಿಸುತ್ತಿದ್ದರು.
21 ಸಾವಿರಕ್ಕೂ ಅಧಿಕ ಮಂದಿ ಬಲಿ?:ಅಧಿಕಾರಿಗಳು ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ ನಾಲ್ಕು ದಿನಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳಿಂದ ಮೃತರ ಸಂಖ್ಯೆ 21,000ಕ್ಕೂ ಅಧಿಕ ಎಂದು ಅಂದಾಜಿಸದಲಾಗಿದೆ. ಅವಶೇಷಗಳ ಅಡಿ ಸಿಲುಕಿದವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಧ್ವಂಸಗೊಂಡ ಕಟ್ಟದಲ್ಲಿ ಬದುಕುಳಿದವರು ಎದುರಿಸುತ್ತಿರುವ ಕಷ್ಟದ ಕಠೋರ ವಾಸ್ತವತೆ ಮನಕಲಕುವಂತಿದೆ. ಭೂಕಂಪಗಳಿಂದ ಸಾವನ್ನಪ್ಪಿದವರ ಸಂಖ್ಯೆ ಟರ್ಕಿಯಲ್ಲಿ 17,674ಕ್ಕೆ ಏರಿದೆ. 72,879 ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಗುರುವಾರ ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ಮತ್ತು ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳನ್ನು ಒಳಗೊಂಡಿರುವ ಸಿರಿಯಾದಲ್ಲಿ 3,100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 5,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜಪಾನ್ ಭೂಕಂಪಕ್ಕಿಂತ ಇದು ಘೋರ: ಸ್ಥಳೀಯ ಕಾಲಮಾನ ಫೆಬ್ರವರಿ 6, 2023 ರಂದು ಮುಂಜಾನೆ 4:17 ಗಂಟೆಗೆ ಟರ್ಕಿಯ ದಕ್ಷಿಣ ಪ್ರಾಂತ್ಯದ ಕಹ್ರಮನ್‌ಮರಸ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ನಂತರ ಕೆಲವು ನಿಮಿಷಗಳ ನಂತರ ದೇಶದ ದಕ್ಷಿಣ ಪ್ರಾಂತ್ಯವಾದ ಗಾಜಿಯಾಂಟೆಪ್‌ನಲ್ಲಿ 6.4 ತೀವ್ರತೆಯ ಭೂಕಂಪ ಮತ್ತು ಮಧ್ಯಾಹ್ನ 1:24 ಕ್ಕೆ 7.6 ತೀವ್ರತೆಯ ಭೂಕಂಪ ಸಂಭವಿಸಿದೆ. ಬುಧವಾರ ಟರ್ಕಿಗೆ ಆಗಮಿಸಿದ 82 ಸದಸ್ಯರ ಚೀನೀ ರಕ್ಷಣಾ ತಂಡ ಸೇರಿದಂತೆ ಅಂತರಾಷ್ಟ್ರೀಯ ಶೋಧ ಮತ್ತು ರಕ್ಷಣಾ ತಂಡಗಳು ರಕ್ಷಣಾ ಕಾರ್ಯಕ್ಕಾಗಿ ಭೂಕಂಪ ಪೀಡಿತ ವಲಯಕ್ಕೆ ಧಾವಿಸಿವೆ. 'ಇದು 2011ರಲ್ಲಿ ಜಪಾನ್‌ನ ಫುಕುಶಿಮಾದಲ್ಲಿ ನಡೆದ ಭೂಕಂಪದ ದುರಂತದಲ್ಲಿ ಸಂಭವಿಸಿದ ಸಾವಿನ ಪ್ರಮಾಣಕ್ಕಿಂತ ಅಧಿಕ. ಜಪಾನ್‌ನ ಫುಕುಶಿಮಾದಲ್ಲಿ ಅಂದು 18,400ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು'.
ಇದನ್ನೂ ಓದಿ:ಟರ್ಕಿಯಲ್ಲಿ ಅವಶೇಷದಡಿಯಿಂದ ಕೇಳಿ ಬಂತು ದ್ವನಿ.. ತಾಯಿಯನ್ನು ರಕ್ಷಿಸಲು ಅಂಗಲಾಚಿದ ಮಗಳು!
ರಕ್ಷಣಾ ಕಾರ್ಯಕ್ಕೆ ಅಡ್ಡಿ:ಟರ್ಕಿಯ ಅಂಟಾಕ್ಯಾ ನಗರದಲ್ಲಿ, ಮಕ್ಕಳ ಕೋಟ್‌ಗಳು ಮತ್ತು ಇತರ ಸಾಮಾಗ್ರಿಗಳನ್ನು ವಿತರಿಸುವ ಟ್ರಕ್‌ನ ಮುಂದೆ ಜನರು ಮುಗಿಬಿದ್ದಿದ್ದರು. ಬದುಕುಳಿದ ಅಹ್ಮತ್ ಟೊಕ್ಗೊಜ್ ಎಂಬಾತ ಈ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಲು ಸರ್ಕಾರಕ್ಕೆ ಮನವಿ ಮಾಡಿದರು. ಮನೆ ಕಳೆದುಕೊಂಡವರಲ್ಲಿ ಹಲವರು ಟೆಂಟ್‌ಗಳು, ಕ್ರೀಡಾಂಗಣಗಳು ಮತ್ತು ಇತರ ತಾತ್ಕಾಲಿಕ ವಸತಿಗಳಲ್ಲಿ ಆಶ್ರಯ ಪಡೆದಿದ್ದಾರೆ. ಹಲವರು ಅವಶೇಷಗಳಡಿಯಲ್ಲಿ ಸಿಲುಕಿ ಸಾಯುತ್ತಿದ್ದರೆ, ಇನ್ನೂ ಕೆಲವರು ಚಳಿಯಿಂದ ಸಾವನ್ನಪ್ಪುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾ ಎರಡರಲ್ಲೂ ಪ್ರತಿಕೂಲ ಹವಾಮಾನ, ರಸ್ತೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಹಾನಿಯಾಗಿದ್ದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಟರ್ಕಿಯಲ್ಲಿ ಕೆಲವರು ರಕ್ಷಣಾ ಪ್ರಕ್ರಿಯೆ ತುಂಬಾ ನಿಧಾನವಾಗಿದೆ ಎಂದು ದೂರಿದ್ದಾರೆ.