ಅಂಕಾರಾ : ಸಿರಿಯಾದ ಕುರ್ದಿಶ್ ಪೀಪಲ್ಸ್ ಡಿಫೆನ್ಸ್ ಯೂನಿಟ್ (ವೈಪಿಜಿ) ನಡೆಸಿದ ದಾಳಿಗೆ ಪ್ರತಿಯಾಗಿ ತನ್ನ ಪಡೆಗಳು 26 ಕುರ್ದಿಶ್ ಉಗ್ರರನ್ನು ಹತ್ಯೆಗೈದಿವೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಉತ್ತರ ಸಿರಿಯಾದಲ್ಲಿನ ಟರ್ಕಿಶ್ ಮಿಲಿಟರಿಯ ಯೂಫ್ರೆಟಿಸ್ ಶೀಲ್ಡ್ ಕಾರ್ಯಾಚರಣೆ ವಲಯದ ದಾಬಿಕ್ ಬೇಸ್ ಪ್ರದೇಶದ ಮೇಲೆ ವೈಪಿಜಿ ಗುರುವಾರ ತಡರಾತ್ರಿ ದಾಳಿ ನಡೆಸಿದ ನಂತರ ಅಂಕಾರಾ ಪ್ರತೀಕಾರ ಕೈಗೊಂಡಿದೆ ಎಂದು ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಟರ್ಕಿಯ ಯುದ್ಧವಿಮಾನಗಳು ವೈಪಿಜಿ ವಿರುದ್ಧ ವೈಮಾನಿಕ ದಾಳಿ ನಡೆಸಿದ್ದು, ಗುರುವಾರ ರಾತ್ರಿ ತಾಲ್ ರಿಫಾತ್, ಜಜಿರಾ ಮತ್ತು ಡೆರಿಕ್ ಪ್ರದೇಶಗಳಲ್ಲಿನ 30 ಗುರಿಗಳನ್ನು ಧ್ವಂಸಗೊಳಿಸಿವೆ ಎಂದು ಸಚಿವಾಲಯ ತಿಳಿಸಿದೆ. ಗುರುವಾರ ಮುಂಜಾನೆ, ವೈಪಿಜಿಯ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡು ಗೋದಾಮುಗಳ ಮೇಲೆ ರಾಷ್ಟ್ರೀಯ ಗುಪ್ತಚರ ಸಂಸ್ಥೆ (ಎಂಐಟಿ) ಸಶಸ್ತ್ರ ಡ್ರೋನ್ಗಳಿಂದ ದಾಳಿ ನಡೆಸಿದೆ ಎಂದು ಅರೆ-ಅಧಿಕೃತ ಅನಾಡೋಲು ಏಜೆನ್ಸಿ ವರದಿ ಮಾಡಿದೆ.
ಅಂಕಾರಾದಲ್ಲಿ ಭಾನುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಸಿರಿಯನ್ ಕುರ್ದಿಶ್ ಗುಂಪು ಮತ್ತು ಟರ್ಕಿಶ್ ಪಡೆಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಟರ್ಕಿಯ ಆಂತರಿಕ ಸಚಿವಾಲಯದ ಮುಂದೆ ಭಾನುವಾರ ಸಂಭವಿಸಿದ ದಾಳಿಯ ಜವಾಬ್ದಾರಿಯನ್ನು ನಿಷೇಧಿತ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ವಹಿಸಿಕೊಂಡಿದೆ. ಇದರಲ್ಲಿ ಒಬ್ಬ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಮತ್ತು ಇನ್ನೊಬ್ಬನು ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.