ವಾಷಿಂಗ್ಟನ್:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೈಂಗಿಕ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಜಗತ್ತಿನ ಶ್ರೀಮಂತ ಮತ್ತು ಟ್ವಿಟರ್ ಸಿಇಒ ಎಲಾನ್ ಮಸ್ಕ್, ಒಂದು ವೇಳೆ ಟ್ರಂಪ್ ಅವರನ್ನು ಬಂಧಿಸಿದ್ದೇ ಆದಲ್ಲಿ ಅವರು ಮುಂದಿನ ಚುನಾವಣೆಯಲ್ಲಿ "ಪ್ರಚಂಡ ಗೆಲುವು" ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಮುಂದಿನ ವಾರದಲ್ಲಿ ಟ್ರಂಪ್ ಅರೆಸ್ಟ್ ಮಾಡಲಾಗುವುದು ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಮಸ್ಕ್, "ಇದೊಂದು ವೇಳೆ ಸಂಭವಿಸಿದರೆ, ಟ್ರಂಪ್ ಅವರು ಪ್ರಚಂಡ ವಿಜಯ ಸಾಧಿಸಿ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆಯಾಗುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಕೂಡ ತಮ್ಮ ಬಂಧನದ ಬಗ್ಗೆ ಹೇಳಿಕೆ ನೀಡಿದ್ದು, "ತಮ್ಮನ್ನು ಬೈಡನ್ ಸರ್ಕಾರ ಬಂಧಿಸಲಿದೆ. ಹೀಗಾಗಿ ನನ್ನ ಬೆಂಬಲಿಗರು ಪ್ರತಿಭಟನೆ ಮಾಡಬೇಕು. ದೇಶವನ್ನು ವಾಪಸ್ ಪಡೆಯಬೇಕು ಎಂದು ಕರೆ ನೀಡಿದ್ದಾರೆ" ಎಂದು ವರದಿಯಾಗಿದೆ.
ರಿಪಬ್ಲಿಕನ್ ಪಕ್ಷದ ಮುಂಚೂಣಿ ನಾಯಕ ಮತ್ತು ಮಾಜಿ ಅಧ್ಯಕ್ಷರನ್ನು ಮುಂದಿನ ವಾರದ ಮಂಗಳವಾರದಂದು ಬಂಧಿಸಲಾಗುವುದು ಮ್ಯಾನ್ ಹಾಟನ್ ಅಟಾರ್ನಿ ಕಚೇರಿಯಿಂದ ಮಾಹಿತಿ ಬಂದಿದೆ. ಅವರು ಬಂಧಿಸಲು ಉದ್ದೇಶಿಸಿರುವ ವ್ಯಕ್ತಿ ನಾನೇ. ಇದರ ವಿರುದ್ಧ ನನ್ನ ಬೆಂಬಲಿಗರು ಹೋರಾಟ ನಡೆಸಬೇಕು ಎಂದು ಟ್ರಂಪ್ ಕೋರಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ನ್ಯೂಯಾರ್ಕ್ ನಗರದಲ್ಲಿ ಕಾನೂನು ಜಾರಿ ಸಂಸ್ಥೆಗಳ ನಡುವೆ ದಿನವೂ ಸಭೆಗಳು ನಡೆಯುತ್ತಿವೆ. ಡೊನಾಲ್ಡ್ ಟ್ರಂಪ್ ವಿರುದ್ಧ ಕೇಳಿಬಂದಿರುವ ಅಕ್ರಮ ಲೈಂಗಿಕ ಸಂಪರ್ಕದ ಪ್ರಕರಣದಲ್ಲಿ ಅವರನ್ನು ಹೇಗೆ ಬಂಧಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ವರದಿ ಮಾಡಿವೆ.
ಟ್ರಂಪ್ ವಿರುದ್ಧದ ಆರೋಪವೇನು?:2024 ರಲ್ಲಿ ಮರುಚುನಾವಣೆಗೆ ಸ್ಪರ್ಧಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಿಳೆಯೊಂದಿಗೆ ಅಕ್ರಮವಾಗಿ ಲೈಂಗಿಕ ಸಂಪರ್ಕ ಹೊಂದಿದ್ದು, ಆಕೆ ಇದನ್ನು ಎಲ್ಲಿಯೂ ಬಾಯಿಬಿಡದಂತೆ ಹಣ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಹಣ ನೀಡಿ ಬೆದರಿಕೆ ಹಾಕಿ ಮಾಜಿ ಅಧ್ಯಕ್ಷರ ವಿರುದ್ಧ ಪೊಲೀಸ್ ತನಿಖೆ ನಡೆಸಲಾಗುತ್ತಿದೆ. ಇದೇ ಪ್ರಕರಣದಲ್ಲಿ ಅವರನ್ನು ಬಂಧಿಸಲು ಶ್ವೇತಭವನ ಮುಂದಾಗಿದೆ.
ಟ್ರಂಪ್ ಮೇಲೆ ಗಂಭೀರ ಆರೋಪ ಕೇಳಿ ಬಂದಿರುವುದು ಇದೇ ಮೊದಲಲ್ಲ. ಅಧ್ಯಕ್ಷರಾಗಿ ಆಯ್ಕೆಯಾಗುವ ಮೊದಲೇ ಅವರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದವು. ಮುಂದಿನ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ಟ್ರಂಪ್ ಕಣಕ್ಕಿಳಿಯಲು ಉದ್ದೇಶಿಸಿದ್ದು, ಅವರ ಮೇಲೆ ಈ ಗಂಭೀರ ಆರೋಪ ಮುನ್ನೆಲೆಗೆ ಬಂದಿದೆ.
ಮಾಹಿತಿ ನೀಡಿಲ್ಲ, ಸೋರಿಕೆಯಾಗಿದೆ:ಇನ್ನು, ಮ್ಯಾನ್ ಹಾಟನ್ ಅಟಾರ್ನಿ ಕಚೇರಿಯಿಂದ ಮಾಹಿತ ಬಂದಿದೆ ಎಂಬ ಟ್ರಂಪ್ ಹೇಳಿಕೆ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿಸಿದೆ. ಟ್ರಂಪ್ಗೆ ಮಾಹಿತಿ ನೀಡಿದ್ಯಾರು ಎಂದು ಕೋರ್ಟ್ ಪ್ರಶ್ನಿಸಿದೆ. ಆದರೆ, ಇದನ್ನು ಮ್ಯಾನ್ ಹಾಟನ್ ಕಚೇರಿ ತಿರಸ್ಕರಿಸಿದೆ. ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. ಬಹುಶಃ ಅದು ಸೋರಿಕೆಯಾಗಿರಬಹುದು ಎಂದು ವಕ್ತಾರರು ತಿಳಿಸಿದ್ದಾರೆ.
ಟ್ರಂಪ್ ವಿರುದ್ಧ ಕೇಳಿಬಂದ ದೋಷಾರೋಪ ಅಮೆರಿಕದ ಇತಿಹಾಸದಲ್ಲಿ ಅಭೂತಪೂರ್ವವಾಗಿರುತ್ತದೆ. ರಿಚರ್ಡ್ ನಿಕ್ಸನ್ ವಾಟರ್‌ಗೇಟ್ ಹಗರಣಕ್ಕೆ ಸಂಬಂಧಿಸಿದ ಕ್ರಿಮಿನಲ್ ಆರೋಪಗಳನ್ನು ಎದುರಿಸಿಒ 1974 ರಲ್ಲಿ ರಾಜೀನಾಮೆ ನೀಡಿದ್ದರು. ನಂತರ ಅವರ ಉತ್ತರಾಧಿಕಾರಿಯಾದ ಅಧ್ಯಕ್ಷ ಜೆರಾಲ್ಡ್ ಫೋರ್ಡ್ ಅವರನ್ನು ಕ್ಷಮಿಸಿದ್ದರು.
ಇದನ್ನೂ ಓದಿ:ಡಾ.ಮಾರಿಯೋ ಮೊಲಿನಾರನ್ನು ಡೂಡಲ್ ಮೂಲಕ ಸ್ಮರಿಸಿದ ಗೂಗಲ್: ಯಾರಿವರು ಗೊತ್ತೇ?