ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಘೋಷಣೆಯ ವೇಳೆ ಗಲಾಟೆಗೆ ಕುಮ್ಮಕ್ಕು ನೀಡಿದ ಗಂಭೀರ ಆರೋಪದಲ್ಲಿ ಶಾಶ್ವತವಾಗಿ ಅಮಾನತುಗೊಂಡಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮರು ಸಕ್ರಿಯಗೊಳಿಸಲಾಗುತ್ತದೆ ಎಂದು ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಹೇಳಿದ್ದಾರೆ.
2021ರ ಜನವರಿ 6ರಂದು ಅಧ್ಯಕ್ಷೀಯ ಚುನಾವಣೆ ಯಫಲಿತಾಂಶ ಘೋಷಣೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕ್ಯಾಪಿಟೋಲ್ ಮೇಲೆ ದಾಳಿ ಮಾಡಿದ್ದರು. ಇದಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಟ್ರಂಪ್ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು.
ಇದರ ಬೆನ್ನಲ್ಲೇ, ಟ್ವಿಟರ್‌ನ ನೂತನ ಮುಖ್ಯಸ್ಥ ಎಲೋನ್ ಮಸ್ಕ್, ಟ್ರಂಪ್ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಬೇಕೇ?. 'ಹೌದು ಅಥವಾ ಇಲ್ಲ' ಎಂದು ಟ್ವೀಟ್ ಮಾಡುವಂತೆ ತಿಳಿಸಿ ಜನಮತ ಆರಂಭಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶೇ.51.8ರಷ್ಟು ಜನರು ಟ್ರಂಪ್ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಬೇಕೆಂದೂ ಹಾಗೂ ಶೇ.48.2ರಷ್ಟು ಜನರು ಬೇಡವೆಂದೂ ತಿಳಿಸಿದ್ದರು. ಹೆಚ್ಚು ಜನರು ಹೌದು ಎಂದು ಪ್ರತಿಕ್ರಿಯೆ ನೀಡಿರುವ ಕಾರಣಕ್ಕೆ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಲಾಗುವುದು ಎಂದು ಎಲಾನ್ ಮಸ್ಕ್ ಪ್ರಕಟಿಸಿದ್ದಾರೆ.
ಈ ಬಗ್ಗೆ ಸ್ವತಃ ಎಲಾನ್ ಮಸ್ಕ್ ಅವರೇ ಟ್ವೀಟ್ ಮಾಡಿದ್ದಾರೆ. ಜನರು ತಮ್ಮ ಅಭಿಪ್ರಾಯ ನೀಡಿದ್ದಾರೆ. ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಟ್ರಂಪ್ ಟ್ವಿಟರ್ ಖಾತೆ ಮರು ಸ್ಥಾಪಿಸಬೇಕೇ?: ಸಮೀಕ್ಷೆ ಆರಂಭಿಸಿದ ಎಲೋನ್ ಮಸ್ಕ್