ವಾಷಿಂಗ್ಟನ್ :ಪಕ್ಷಿಯನ್ನು ಸಾಕುವ ಪಂಜರ ಹಾಗೂ ಪಕ್ಷಿಯ ಆಹಾರದ ಪಾರ್ಸಲ್ ಒಂದನ್ನು ತಾವಿರುವ ಹೋಟೆಲ್ ಕೋಣೆಗೆ ಕಳುಹಿಸಲಾಗಿದೆ 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಟ್ರಂಪ್ ಕ್ಯಾಂಪೇನ್ ವತಿಯಿಂದ ಇದನ್ನು ತಮಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹ್ಯಾಲೆ, ಪಕ್ಷಿಯ ಪಂಜರ ಮತ್ತು ದೊಡ್ಡ ಪಕ್ಷಿ ಆಹಾರದ ಪೊಟ್ಟಣವಿರುವ ಚಿತ್ರವನ್ನು ಶೇರ್ ಮಾಡಿ, "ಇದು ಟ್ರಂಪ್ ಕ್ಯಾಂಪೇನ್ನಿಂದ ಬಂದಿದೆ" (From: Trump Campaign) ಎಂದು ಬರೆದಿದ್ದಾರೆ.
"ದಿನದ ಚುನಾವಣಾ ಪ್ರಚಾರದ ನಂತರ ನನ್ನ ಹೊಟೇಲ್ ಕೋಣೆಯ ಬಳಿ ಈ ಸಂದೇಶ ನನಗಾಗಿ ಕಾಯುತ್ತಿತ್ತು. #PrettyPatheticTryAgain #YouJustMadeMyCaseForMe" ಎಂದು ಅವರು ಬರೆದಿದ್ದಾರೆ. ಇದು ಟ್ರಂಪ್ ಅವರ ಚುನಾವಣಾ ಪ್ರಚಾರ ತಂಡದ ಕೆಲಸವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಟ್ರಂಪ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಜಿಒಪಿ ಪ್ರೈಮರಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಡೊನಾಲ್ಡ್ ಟ್ರಂಪ್, ವಿಶ್ವಸಂಸ್ಥೆಯಲ್ಲಿ ರಾಯಭಾರಿಯಾಗಿ ಮತ್ತು ದಕ್ಷಿಣ ಕೆರೊಲಿನಾದ ಮಾಜಿ ಗವರ್ನರ್ ಆಗಿ ಸೇವೆ ಸಲ್ಲಿಸಿದ ಹ್ಯಾಲೆ ಅವರತ್ತ ತಮ್ಮ ಗಮನ ಹರಿಸಿದ್ದಾರೆ. ಇದಲ್ಲದೇ, ಎರಡೂ ಜಿಒಪಿ ಚರ್ಚೆಗಳಲ್ಲಿ ತಮ್ಮ ಪ್ರಭಾವಶಾಲಿ ಪ್ರದರ್ಶನದಿಂದಾಗಿ ನಿಕ್ಕಿ ಹ್ಯಾಲೆ ಜಿಒಪಿ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಮುನ್ನಡೆದಿದ್ದಾರೆ.
ಶುಕ್ರವಾರ ಹ್ಯಾಲೆ ಅವರನ್ನು ಉಲ್ಲೇಖಿಸಿ ಟ್ರಂಪ್ ಪೋಸ್ಟ್ ಮಾಡಿದ್ದು ಗಮನಾರ್ಹ. ಹ್ಯಾಲೆ ಅವರನ್ನು ಬರ್ಡ್ಬ್ರೇನ್ (ಪಕ್ಷಿಯ ಬುದ್ಧಿಯವಳು) ಎಂದು ಕರೆದ ಟ್ರಂಪ್, "ನಾನು ಯಾವತ್ತೂ ನಮ್ಮ ಅದ್ಭುತ ಅಧ್ಯಕ್ಷರ ಎದುರು ನಿಲ್ಲುವುದಿಲ್ಲ, ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ, ಅದಕ್ಕೆ ಪ್ರತಿಕ್ರಿಯೆಯಾಗಿ ನಾನು ಹೇಳಿದ್ದೆ: ನಿಕ್ಕಿ ನಿಮಗೆ ಹೇಳುವುದು ತುಂಬಾ ಖುಷಿಯಾಗುತ್ತಿದೆ. ಆಕೆಯ ಮಾತುಗಳಿಗೆ ಯಾವುದೇ ಅರ್ಥವಿಲ್ಲ ಎಂಬುದು ನನಗೆ ಗೊತ್ತು. ಆಕೆ ತಮ್ಮ ಕುಟುಂಬದೊಂದಿಗೆ ಗಿಫ್ಟ್ಗಳನ್ನು ತೆಗೆದುಕೊಂಡು ಮಾರ್-ಎ-ಲಾಗೊ ಗೆ ಬಂದಿದ್ದರು. ಏನೇ ಆದರೂ ಪಕ್ಷಿಬುದ್ಧಿಯವರಿಗೆ ಯಾವುದೇ ಜಾಣತನ ಅಥವಾ ಸಹನಶೀಲತೆ ಇರುವುದಿಲ್ಲ. ಅಮೆರಿಕವನ್ನು ಮತ್ತೊಮ್ಮೆ ಉನ್ನತಿಗೆ ಕೊಂಡೊಯ್ಯೋಣ" ಎಂದು ಹೇಳಿದ್ದರು.
ಟ್ರಂಪ್ ದಾಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ಹ್ಯಾಲೆ, "ಇದು ನನಗೆ ಇಷ್ಟ. ಅಂದರೆ ನಾವು 2ನೇ ಸ್ಥಾನದಲ್ಲಿದ್ದೇವೆ ಮತ್ತು ವೇಗವಾಗಿ ಮೇಲಕ್ಕೇರುತ್ತಿದ್ದೇವೆ. ನಿಮ್ಮ ಕೆಲಸ ಮುಂದುವರಿಸಿ" ಎಂದು ಹೇಳಿದ್ದರು.
ಭಾರತೀಯ ಅಮೆರಿಕನ್ ಮಹಿಳೆ ನಿಕ್ಕಿ ಹ್ಯಾಲೆ ಅವರು 2024 ರ ರಿಪಬ್ಲಿಕನ್ ಅಧ್ಯಕ್ಷೀಯ ಚುನಾವಣೆಗೆ ಈ ವರ್ಷದ ಫೆಬ್ರವರಿಯಲ್ಲಿ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ. ತಮ್ಮ ಪಕ್ಷದ ಈಗಿನ ನಾಯಕತ್ವವು ಅಧ್ಯಕ್ಷೀಯ ಚುನಾವಣೆಯಲ್ಲಿ ಜನಪ್ರಿಯ ಮತಗಳನ್ನು ಸೆಳೆಯಲು ಪದೇ ಪದೇ ವಿಫಲವಾಗಿದೆ ಎಂದು ಒಪ್ಪಿಕೊಂಡ ನಿಕ್ಕಿ ಹ್ಯಾಲೆ, ಪಕ್ಷಕ್ಕೆ ಹೊಸ ನಾಯಕತ್ವದ ಅಗತ್ಯವಿದೆ ಎಂದಿದ್ದರು.
ಇದನ್ನೂ ಓದಿ :ಪ್ರತಿ ನಿಮಿಷಕ್ಕೆ ಲಕ್ಷಾಂತರ ಡಾಲರ್ ಗಳಿಕೆ! ಅಸಲಿಯತ್ತೇನು? ಎಲೋನ್ ಮಸ್ಕ್ ಸ್ಪಷ್ಟನೆ ಹೀಗಿದೆ..