ನ್ಯೂಯಾರ್ಕ್: ಎಲೋನ್ ಮಸ್ಕ್ ಸಾಮಾಜಿಕ ಮಾಧ್ಯಮ ವೇದಿಕೆಯ ಅಧಿಕೃತ ಮಾಲೀಕರಾಗಿ ಕಾರ್ಯರೂಪಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ ಮಾಲೀಕರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಗುರುವಾರ ಪ್ರಮುಖ ಟ್ವಿಟರ್ ಕಾರ್ಯನಿರ್ವಾಹಕರನ್ನು ವಜಾಗೊಳಿಸಿದ್ದಾರೆ. ಇದರ ಮಧ್ಯೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಲ್ಲಿ ನಕಲಿ ಅಭಿನಂದಾನ ಪತ್ರವೊಂದು ವೈರಲ್ ಆಗ್ತಿದೆ.
ಮಾಧ್ಯಮಗಳ ವರದಿಗಳ ಪ್ರಕಾರ, ಸಿಇಒ ಪರಾಗ್ ಅಗರ್ವಾಲ್, ಸಿಎಫ್‌ಒ ನೆಡ್ ಸೆಗಲ್, ಸಾಮಾನ್ಯ ಸಲಹೆಗಾರ ಸೀನ್ ಎಡ್ಜೆಟ್ ಮತ್ತು ಕಾನೂನು ನೀತಿ, ಟ್ರಸ್ಟ್ ಮತ್ತು ಭದ್ರತೆಯ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ಮಸ್ಕ್ ವಜಾಗೊಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ರದ್ದು ಮಾಡುವಲ್ಲಿ ವಿಜಯ ಗಡ್ಡೆ ಪಾತ್ರ ಮುಖ್ಯವಾಗಿತ್ತು.
ಮಾಜಿ ಅಧ್ಯಕ್ಷ ಟ್ರಂಪ್ ಹೆಸರಲ್ಲಿ ನಕಲಿ ಅಭಿನಂದನೆ ಪತ್ರ:ನಕಲಿಅಭಿನಂದನೆ ಪತ್ರದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವಿಟ್ಟರ್ ಖರೀದಿಸಿದ್ದಕ್ಕಾಗಿ ಎಲೋನ್ ಮಸ್ಕ್ಗೆ ಅಭಿನಂದನೆಗಳ ಸಲ್ಲಿಸಿದ್ದಾರೆ. ಬದಲಾವಣೆಯ ಅಗತ್ಯವಿದೆ. ಬ್ಯಾಕ್ ಅಪ್‌ನೊಂದಿಗೆ ಸೋಮವಾರದೊಳಗೆ ನನ್ನ ಖಾತೆಯನ್ನು ಸಕ್ರಿಯಗೊಳಿಸಲಾಗುವುದು ಎಂದು ನನಗೆ ತಿಳಿಸಿದ್ದಾರೆ ಅಂತಾ ಟ್ರಂಪ್ ಹೇಳಿದ್ದಾರೆ ಎಂಬ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
44 ಶತಕೋಟಿ ಟ್ವಿಟರ್ ಸ್ವಾಧೀನ ಒಪ್ಪಂದವು ಮುಕ್ತಾಯಗೊಂಡಿದ್ದು, ಟೆಸ್ಲಾ ಕಂಪನಿಯ ಸಿಇಒ ಎಲೋನ್ ಮಸ್ಕ್ ಬುಧವಾರ ಸ್ಯಾನ್ ಫ್ರಾನ್ಸಿಸ್ಕೋದ ಟ್ವಿಟರ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಕೈ ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಕಚೇರಿಗೆ ಆಗಮಿಸಿದ್ದು ವಿಶೇಷವಾಗಿತ್ತು.
ಏಪ್ರಿಲ್‌ನಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಅನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ಬಿಲಿಯನೇರ್ ಘೋಷಿಸಿದಾಗಿನಿಂದ ಹಲವು ನಾಟಕೀಯ ಬೆಳವಣಿಗೆಗಳು ನಡೆದಿದ್ದವು. ಜುಲೈನಲ್ಲಿ ಟ್ವಿಟರ್ ಡೀಲ್ ರದ್ದುಗೊಳಿಸಿದ್ದ ಟೆಸ್ಲಾ ಸಿಇಒ, ಟ್ವಿಟರ್ ನಾಯಕತ್ವವು ಬಾಟ್ ಖಾತೆಗಳ ಸಂಖ್ಯೆಯನ್ನು ತಪ್ಪಾಗಿ ಪ್ರತಿನಿಧಿಸುವ ಮೂಲಕ ಖರೀದಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು. ಬಳಿಕ, ಎಲೋನ್ ಮಸ್ಕ್ ವಿರುದ್ಧ ಟ್ವಿಟರ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತ್ತು. ಒಪ್ಪಂದದಿಂದ ನಿರ್ಗಮಿಸಲು ಅವರು ಬಾಟ್‌ಗಳನ್ನು ನೆಪವಾಗಿ ಬಳಸಿದ್ದಾರೆ ಎಂದು ಆರೋಪಿಸಿತ್ತು.
ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಬೆನ್ನಲ್ಲೇ ಕಳೆದ ವಾರ ಯೂಟರ್ನ್ ತೆಗೆದುಕೊಂಡಿದ್ದ ಎಲಾನ್ ಮಸ್ಕ್, ಮೂಲತಃ ಒಪ್ಪಿದ ಬೆಲೆಯಲ್ಲಿ ಒಪ್ಪಂದವನ್ನು ಮುಂದುವರಿಸುವುದಾಗಿ ದೃಢಪಡಿಸಿದ್ದರು. ಇದೀಗ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನ ಅಧಿಕೃತ ಮಾಲೀಕನ್ನಾಗಿ ಕಾಣಿಸಿಕೊಂಡ ಮಸ್ಕ್ ಟ್ವಿಟರ್ ಬಯೋವನ್ನು "ಚೀಫ್ ಟ್ವೀಟ್" ಎಂದು ಬದಲಾಯಿಸಿಕೊಂಡಿದ್ದಾರೆ.
ಓದಿ:ಕೈಯ್ಯಲ್ಲಿ ಸಿಂಕ್ ಹಿಡಿದು ಟ್ವಿಟರ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಎಲಾನ್ ಮಸ್ಕ್