ವಾಷಿಂಗ್ಟನ್(ಯುಎಸ್ಎ): 2016ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ನೀಲಿ ತಾರೆಯೊಬ್ಬರಿಗೆ ಮಾಹಿತಿ ಗೌಪ್ಯವಾಗಿಡುವಂತೆ ಸೂಚಿಸಿ ಹಣ ನೀಡಿರುವ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಗುರುವಾರ ದೋಷಾರೋಪಣೆ ಮಾಡಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಮೆರಿಕ ಇತಿಹಾಸದಲ್ಲಿಯೇ ಕ್ರಿಮಿನಲ್ ಆರೋಪಗಳನ್ನು ಹೊತ್ತ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಕೀರ್ತಿಗೆ ಪಾತ್ರರಾಗಿದ್ದಾರೆ.
ಗೌಪ್ಯತೆ ಕಾಪಾಡಲು ದುಡ್ಡು: ಮ್ಯಾನ್‌ಹ್ಯಾಟನ್ ಜಿಲ್ಲಾ ವಕೀಲರ ಕಚೇರಿಯಿಂದ ಮೊಹರು ಸಲ್ಲಿಸಿದ ಅಪರಾಧದ ದೋಷಾರೋಪಣೆಯನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುವುದು. ವರದಿಗಳ ಪ್ರಕಾರ, ಟ್ರಂಪ್ ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ ನೀಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದಂತೆ, "ಅಲ್ವಿನ್ ಬ್ರಾಗ್ ಮತ್ತು ಅವರ ತನಿಖಾ ತಂಡ ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ ಪಾವತಿಸಿದ ಹಣದ ಬಗ್ಗೆ ಪುರಾವೆಗಳನ್ನು ಕೇಳಿತ್ತು. ಆಗ ಟ್ರಂಪ್ ಮಾರ್-ಎ-ಲಾಗೊ, ಅವರ ಫ್ಲೋರಿಡಾ ಮನೆ ಮತ್ತು ಖಾಸಗಿ ಕ್ಲಬ್‌ನಲ್ಲಿದ್ದರು. ಪ್ರಕರಣದಲ್ಲಿ ಟ್ರಂಪ್ ಪರ ವಕೀಲರಾದ ಸುಸಾನ್ ನೆಚೆಲೆಸ್ ಮತ್ತು ಜೋಸೆಫ್ ಟಕೋಪಿನಾ ಹೇಳಿಕೆಯಲ್ಲಿ, "ತಮ್ಮ ಕಕ್ಷಿದಾರನನ್ನು ದೋಷಾರೋಪಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅವರು ಯಾವುದೇ ಅಪರಾಧ ಮಾಡಿಲ್ಲ. ನಾವು ನ್ಯಾಯಾಲಯದಲ್ಲಿ ಈ ರಾಜಕೀಯ ಕಾನೂನು ಕ್ರಮದ ವಿರುದ್ಧ ತೀವ್ರವಾಗಿ ಹೋರಾಡುತ್ತೇವೆ" ಎಂದು ಅವರು ಹೇಳಿದರು.
ಆರೋಪ ನಿರಾಕರಿಸಿದ ಟ್ರಂಪ್: ನೀಲಿತಾರೆ ಡೇನಿಯಲ್ಸ್ ಜತೆಗಿನ ಸಂಬಂಧವನ್ನು ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ. ತನಿಖೆ ಮಾಡುವವರು ರಾಜಕೀಯಪ್ರೇರಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಮ್ಯಾನ್‌ಹ್ಯಾಟನ್ ಗ್ರ್ಯಾಂಡ್ ಜ್ಯೂರಿಯು ಟ್ರಂಪ್ ಚುನಾವಣೆಯ ಮೊದಲು ಮಾಡಿದ ಪಾವತಿಗಳಿಗೆ ಸಂಬಂಧಿಸಿದಂತೆ ರಿಪಬ್ಲಿಕನ್‌ನ ಐತಿಹಾಸಿಕ ದೋಷಾರೋಪಣೆಯನ್ನು ಗುರುವಾರ ಶ್ವೇತಭವನಕ್ಕೆ ಕಳುಹಿಸಿದ್ದಾರೆ. ಟ್ರಂಪ್ ಮತ್ತೆ ಅಧಿಕಾರ ಪಡೆಯಲು ಆಶಿಸುತ್ತಿರುವ ಸಂದರ್ಭದಲ್ಲಿ ಇದು ಅವರಿಗೆ ತೊಡಕಾಗಿದೆ.