ವಾಷಿಂಗ್ಟನ್ (ಅಮೆರಿಕ):ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪ ಇದೀಗ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುವಂತೆ ಮಾಡಿದೆ. ಟ್ರುಡೊ ಹೇಳಿಕೆಯ ನಂತರ ಕೆನಡಾ ಸರ್ಕಾರ ಸೋಮವಾರ ಉನ್ನತ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿತ್ತು. ಇತ್ತ ಭಾರತೀಯ ರಾಜತಾಂತ್ರಿಕರನ್ನು ಕೆನಡಾ ಉಚ್ಚಾಟಿಸಿದ ಕೆಲವೇ ಗಂಟೆಗಳಲ್ಲಿ ಭಾರತವೂ ಮಂಗಳವಾರ ಕೆನಡಾದ ಉನ್ನತ ರಾಜತಾಂತ್ರಿಕರನ್ನು ಹೊರಹಾಕಿ ಕಠಿಣ ಕ್ರಮದ ಸಂದೇಶ ರವಾನಿಸಿದೆ.
ಈ ನಡುವೆ ಭಾರತೀಯ ಸರ್ಕಾರಿ ಏಜೆಂಟ್ ಮತ್ತು ಖಲಿಸ್ತಾನಿ ನಾಯಕನ ಹತ್ಯೆಯ ನಡುವಿನ ಸಂಭಾವ್ಯ ಸಂಬಂಧದ ಬಗ್ಗೆ ಜಸ್ಟಿನ್ ಟ್ರುಡೊ ಹೇಳಿಕೆಯನ್ನು 'ನಿರ್ಲಜ್ಜ ಮತ್ತು ಸಿನಿಕತನದ ಕ್ರಮ' ಎಂದು ಯುಎಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಈ ಪ್ರಕರಣದ ಭಾಗವಾಗಬಾರದು ಎಂದು ಸಲಹೆ ನೀಡಿದ್ದಾರೆ.
ಹಡ್ಸನ್ ಇನ್‌ಸ್ಟಿಟ್ಯೂಟ್ ಥಿಂಕ್-ಟ್ಯಾಂಕ್‌ನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಫೆಲೋ ಮೈಕೆಲ್ ರೂಬಿನ್, "ಟ್ರೂಡೊ ಅವರು ಖಲಿಸ್ತಾನಿ ಚಳುವಳಿಯನ್ನು ಅಹಂ ಮತ್ತು ಲಾಭದ ಚಳುವಳಿಯಾಗಿ ನೋಡುತ್ತಿರುವ ಜನರ ಕೈಗೊಂಬೆ" ಎಂದು ದೂರಿದರು. ಟ್ರುಡೋ ಜವಾಬ್ದಾರರಾಗಿರಬೇಕು. ಏಕೆಂದರೆ ಅವರು ಬೆಂಕಿಯೊಂದಿಗೆ ಆಡುತ್ತಿದ್ದಾರೆ. ಜನಪ್ರಿಯ ರಾಜಕೀಯ ನಿಲುವು ಇಲ್ಲದಿದ್ದರೆ ಏಕೆ ಭಿನ್ನಾಭಿಪ್ರಾಯ?. ಇದು ದೀರ್ಘಾವಧಿಯಲ್ಲಿ ಜಸ್ಟಿನ್ ಟ್ರುಡೊಗೆ ಸಹಾಯ ಮಾಡಬಹುದು. ಆದರೆ ಇದು ಸಮರ್ಥ ನಾಯಕತ್ವವಲ್ಲ. ಕೆಲವು ಹೊರಗಿನ ಕೈಗಳು ಖಾಲಿಸ್ತಾನ್ ಚಳವಳಿಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿವೆ ಎಂದು ರೂಬಿನ್ ಆರೋಪಿಸಿದರು.
ಇದನ್ನೂ ಓದಿ:ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪ ತಿರಸ್ಕರಿಸಿದ ಭಾರತ
ಬಾಹ್ಯಶಕ್ತಿಗಳ ಸಿನಿಕತನದ ಕುಶಲತೆಗಳಿಗೆ ಯುಎಸ್ ಕಾನೂನು ಬದ್ಧತೆ ನೀಡಲು ಬಯಸುವುದಿಲ್ಲ. ಹಠಾತ್ತಾಗಿ ಪ್ರತ್ಯೇಕತಾವಾದಿ ಚಳುವಳಿಯನ್ನು ನೋಡುವುದು ಮತ್ತು ಇದು ನ್ಯಾಯಸಮ್ಮತವಾಗಿದೆ ಎಂದು ವಾದಿಸುವುದು ತಪ್ಪು ಎಂದರು. ಅಮೆರಿಕದ ಸಿಖ್ಸ್ ಫಾರ್ ಜಸ್ಟಿಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ಜಸ್ಸಿ ಸಿಂಗ್, ಖಲಿಸ್ತಾನಿ ಚಳವಳಿಯು ಯುಎಸ್‌ನಲ್ಲಿನ ಬಹುಪಾಲು ಸಿಖ್ಖರ ಧ್ವನಿಯನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ. "ಭಾರತದಲ್ಲಿರುವ ಸಿಖ್ಖರು ಖಲಿಸ್ತಾನದ ಪರವಾಗಿಲ್ಲ. ಇಂದು ಸಿಖ್ಖರು ಭಾರತೀಯ ಸೇನೆಯಲ್ಲಿ ಚೀನಾ ಅಥವಾ ಪಾಕಿಸ್ತಾನದ ವಿರುದ್ಧ ರಾಷ್ಟ್ರವನ್ನು ರಕ್ಷಿಸುತ್ತಿದ್ದಾರೆ" ಎಂದು ಅವರು ಹೇಳಿದರು.
ಜಸ್ಟಿನ್ ಟ್ರುಡೋ ಆರೋಪವೇನು?:ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ. ಈತನ ತಲೆಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಲಾಗಿತ್ತು. ಜೂನ್ 18ರಂದು ಪಶ್ಚಿಮ ಕೆನಡಾದ ಸರ್ರೆಯ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಈತನನ್ನು ಗುಂಡಿಕ್ಕಿ ಕೊಂದಿದ್ದರು. ಸರ್ರೆಯಲ್ಲಿ ನಡೆದ ನಿಜ್ಜರ್ (45) ಹತ್ಯೆಯಲ್ಲಿ 'ಭಾರತ ಸರ್ಕಾರದ ಏಜೆಂಟ್' ಭಾಗಿಯಾಗಿದ್ದಾರೆ ಎಂದು ಕೆನಡಾ ಪ್ರಧಾನಿ ಟ್ರೂಡೋ ಆರೋಪಿದ್ದಾರೆ. ಜಿ20 ಶೃಂಗಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಎಂದು ಹೇಳಿದ್ದರು.
ಕೆನಡಾ ಆರೋಪ ತಿರಸ್ಕರಿಸಿದ ಭಾರತ:ಖಲಿಸ್ತಾನಿ ಉಗ್ರನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಆರೋಪವನ್ನು ಭಾರತ ಸರ್ಕಾರ ಮಂಗಳವಾರ ತಿರಸ್ಕರಿಸಿತ್ತು. ಇದು ಅಸಂಬದ್ಧ ಮತ್ತು ಪ್ರೇರಿತ ಆರೋಪ ಎಂದು ಜರಿದಿತ್ತು. ನಮ್ಮ ದೇಶ ಪ್ರಜಾಪ್ರಭುತ್ವದ ಕಾನೂನಾತ್ಮಕ ಆಳ್ವಿಕೆಗೆ ಒಳಪಟ್ಟ ಪ್ರಜಾಸತ್ತಾತ್ಮಕ ರಾಜಕೀಯವಾಗಿದೆ. ಉಗ್ರನ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿಕೆ ತಿರುಗೇಟು ನೀಡಿತ್ತು. ಅಲ್ಲದೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೆನಡಾದ ರಾಜತಾಂತ್ರಿಕರನ್ನು ಮುಂದಿನ ಐದು ದಿನಗಳಲ್ಲಿ ಭಾರತ ತೊರೆಯುವಂತೆ ಸೂಚಿಸಿದೆ.
ಇದನ್ನೂ ಓದಿ:'ಭಾರತದ ವಿರುದ್ಧ ಖಲಿಸ್ತಾನಿಗಳನ್ನು ಪ್ರಚೋದಿಸುತ್ತಿಲ್ಲ': ರಾಜತಾಂತ್ರಿಕ ಅಧಿಕಾರಿ ಉಚ್ಚಾಟನೆಗೆ ಬೆದರಿದ ಕೆನಡಾ ಪ್ರಧಾನಿ ಟ್ರುಡೊ