ಜೋಹಾನ್ಸ್‌ಬರ್ಗ್:ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಪೂರ್ವದಲ್ಲಿರುವ ಬೋಕ್ಸ್‌ಬರ್ಗ್ ಪಟ್ಟಣದಲ್ಲಿ ಶನಿವಾರ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಸಾಗಿಸುತ್ತಿದ್ದ ಟ್ರಕ್ ಸ್ಫೋಟಗೊಂಡಿದ್ದು, ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ 50 ಮಂದಿ ಗಾಯಗೊಂಡಿದ್ದಾರೆ ಎಂದು ತುರ್ತುಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಹೇಳುವಂತೆ, ಸಂಚಾರ ಸಮಯದಲ್ಲಿ ಟ್ರಕ್‌ನ ಮೇಲ್ಭಾಗ ತಗ್ಗಾಗಿದ್ದ ಸೇತುವೆಯನ್ನು ಸವರಿಕೊಂಡು ಹೋಗಿದ್ದು, ಆ ಸಂದರ್ಭದಲ್ಲಿ ಕಾಣಿಸಿಕೊಂಡು ಜ್ವಾಲೆ ಸ್ಫೋಟಕ್ಕೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ನಿವಾಸಿಗಳು ಸ್ಫೋಟದ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದು, ಇದರಲ್ಲಿ ಟ್ರಕ್ ಸ್ಫೋಟಗೊಂಡ ಸ್ಥಳದಲ್ಲಿ ಕಾರುಗಳು ವೇಗವಾಗಿ ಹೋಗುತ್ತಿರುವುದು, ಅಲ್ಲಿದ್ದ ಪಾದಚಾರಿಗಳು ಬೆಂಕಿಯಿಂದ ತಪ್ಪಿಸಿಕೊಂಡು ಓಡುತ್ತಿರುವುದನ್ನು ಕಾಣಬಹುದು. ಸ್ಥಳೀಯ ವರದಿಗಳ ಪ್ರಕಾರ ಟ್ರಕ್ ಸ್ಫೋಟದಿಂದಾಗಿ ಹಲವಾರು ಮನೆಗಳು ಮತ್ತು ವಾಹನಗಳು ಹಾನಿಗೊಳಗಾಗಿವೆ. ಟ್ಯಾಂಕರ್ ಸಮೀಪದ ಒ ಆರ್ ಟ್ಯಾಂಬೋ ಮೆಮೊರಿಯಲ್ ಆಸ್ಪತ್ರೆಗೆ ಗ್ಯಾಸ್ ಸಾಗಿಸುತ್ತಿತ್ತು ಎನ್ನಲಾಗಿದೆ. ಈ ಅಪಘಾತದಲ್ಲಿ ಗಾಯಗೊಂಡ ಕೆಲವರಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸ್ಫೋಟ ಮತ್ತು ಬೆಂಕಿಯ ಕಾರಣದಿಂದಾಗಿ ಅದೇ ಆಸ್ಪತ್ರೆಯ ಕೆಲವು ಘಟಕಗಳಲ್ಲಿದ್ದ ರೋಗಿಗಳನ್ನು ಸ್ಥಳಾಂತರಿಸಲಾಗಿದೆ.